ಬೆಂಗಳೂರು : ಇಂದು ನಾಡಿನೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ. ತಮ್ಮ ಮನೆಗಳನ್ನು ಸಿಂಗರಿಸಿ ಗಣೇಶ ಪೂಜೆ ಮಾಡುವುದು ಸರ್ವೇ ಸಾಮಾನ್ಯ. ನಮ್ಮ ರಾಜ್ಯದ ಗಣ್ಯರು ಯಾವ ರೀತಿಯಲ್ಲಿ ಗಣೇಶಹಬ್ಬವನ್ನು ಆಚರಿಸಿದ್ದಾರೆ ಅನ್ನೋದನ್ನ ನೋಡೋಣ.
ಪ್ರತಿಯೊಬ್ಬರಿಗೂ ಗಣೇಶ ಚತುರ್ಥಿ ಶುಭಾಶಯಗಳು, ಸುಖ ಶಾಂತಿ ನೆಮ್ಮದಿ ಬಾಳಲಲ್ಲಿ ಬರಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾರೈಸಿದ್ದಾರೆ. ಪರಿಸರಸ್ನೇಹಿ ಗಣೇಶಗೆ ಪೂಜೆ ಸಲ್ಲಿಸಿ, ಕೋವಿಡ್ ನಿಮಯಗಳನ್ನು ಪಾಲಿಸಬೇಕೆಂದು ಮುಖ್ಯಮಂತ್ರಿ ಕೋರಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ಹಬ್ಬ ಆಚರಣೆ ಮಾಡಿದರು. ಹಾಗೆಯೇ ನಾಡಿನ ಎಲ್ಲ ಭಕ್ತರಿಗೆ ವಿನಾಯಕ ಚತುರ್ಥಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳನ್ನು ಸಲ್ಲಿಸಿದ ಅವರು, ವಿಘ್ನನಿವಾರಕನಾದ ವಿಘ್ನೇಶ್ವರನು ನಾಡಿನಪ್ರಗತಿಗೆ ಎದುರಾಗುವ ಎಲ್ಲಾ ವಿಘ್ನಗಳನ್ನು ದೂರಮಾಡಲಿ, ಸಮಸ್ತ ಜನತೆಗೆ ಸುಖ, ಸಂತೋಷ, ಆರೋಗ್ಯ ಭಾಗ್ಯ ಕೊಟ್ಟು ಸದಾ ರಕ್ಷಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಗೌರಿ-ಗಣೇಶ ಹಬ್ಬವು ನಾಡಿನ ಜನರ ಕ್ಲೇಶ ಕಳೆದು ಹರುಷ ತರಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಾರ್ಥಿಸಿದ್ದಾರೆ. ನಾಡಿನೆಲ್ಲೆಡೆ ಗಣೇಶೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವ ಜನತೆಗೆ, ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ನಾಗರಿಕರು, ಸರಕಾರ ಗೊತ್ತುಪಡಿಸಿದ ನೀತಿಸಂಹಿತೆಯ ನಿಯಂತ್ರಣಗಳನ್ನು ಪಾಲಿಸುವುದರೊಂದಿಗೆ
ಗಣೇಶೋತ್ಸವವನ್ನು ಸರಳತೆ ಹಾಗೂ ಶ್ರದ್ದಾಭಕ್ತಿ ಗಳಿಂದ ಆಚರಿಸಲಿ ಎಂದು ತಿಳಿಸಿದ್ದಾರೆ.
ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಕೋರಿದ್ದಾರೆ. ಸಂಕಷ್ಟಹರ ಗಣಪತಿ ಎಲ್ಲರ ಬದುಕಿನಲ್ಲಿ ಸಂತಸ, ಆರೋಗ್ಯ ಕರುಣಿಸಲಿ. ಗಣಪನ ಪೂಜಿಸುವ ಈ ವಿಶೇಷವಾದ ಸಡಗರದ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸೋಣ ಎಂದು ಕರೆ ನೀಡಿದ್ದಾರೆ.