ಅಹಮದಾಬಾದ್ : ಏಕಾಏಕಿ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್ ರೂಪಾಣಿ ಅವರ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಮತ್ತೆ ಅಚ್ಚರಿಯ ಆಯ್ಕೆ ಮಾಡಿದೆ.
ಇಂದು ಸಂಜೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪಟೇಲ್ ಸಮುದಾಯದ ಭೂಪೇಂದ್ರ ಪಟೇಲ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಣೆ ಮಾಡಿ, ಆಯ್ಕೆ ಮಾಡಲಾಯಿತು.
ಗುಜರಾತ್ ವಿಧಾನಸಭಾ ಚುನಾವಣೆಗೆಕೇವಲ 14 ತಿಂಗಳು ಬಾಕಿ ಉಳಿದಿರುವಂತೆ ಬಿಜೆಪಿ ಹೈಕಮಾಂಡ್ ಸೌಮ್ಯ ಸ್ವಭಾವದ ವಿಜಯ್ ರೂಪಾಣಿ ಅವರನ್ನು ಬದಲಾಯಿಸಿ, ಪಟೇಲ್ ಸಮುದಾಯಕ್ಕೆ ಮಣಿ ಹಾಕಿದ್ದಾರೆ.
ಗುಜರಾತ್ ನಲ್ಲಿ ಯಾವುದೇ ಕಾರಣಕ್ಕೂ ಅಧಿಕಾರ ಕಳೆದುಕೊಳ್ಳಬಾರದು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಯನ್ನ ಬದಲಾಯಿಸಿದೆ ಎನ್ನುವುದು ರಾಜಕೀಯ ವಲಯದಲ್ಲಿನ ಮಾತು. ಇತ್ತೀಚೆಗೆ ಉತ್ತರಖಂಡ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಿ ಮುಂಬರುವ ಚುನಾವಣೆಗಳಿಗೆ ಅಣಿಯಾಗಿತ್ತು, ಅದೇ ರೀತಿಯಲ್ಲಿ ಈಗ ಗುಜರಾತಿನಲ್ಲೂ ಮುಖ್ಯಮಂತ್ರಿ ಬದಲಾವಣೆಯ ಅಸ್ತ್ರವನ್ನೇ ಬಳಸಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣಾ ಕಣ. ತಮ್ಮ ಸ್ವಂತ ರಾಜ್ಯ ಮುಖ್ಯಮಂತ್ರಿ, ಗೃಹಸಚಿವರಾಗಿ ಆಳ್ವಿಕೆ ನಡೆಸಿದ ರಾಜ್ಯ ಎಂಬ ಕಾರಣಕ್ಕೆ ಇದು ಮಹತ್ವದ್ದಾಗಿದೆ. ಆದ್ದರಿಂದ 14 ತಿಂಗಳ ಮುಂಚೆಯೇ ಗುಜರಾತ್ ನತ್ತ ಗಮನಹರಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕ ಮುಖಂಡರ ಹೆಸರು ಕೇಳಿ ಬಂದಿದ್ದರೂ ಆಶ್ಚರ್ಯಕರ ರೀತಿಯಲ್ಲಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ.