ಮಂಗಳೂರು : ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್ ಆಫ್ ಕಂಪನೀಸ್ ತೆಕ್ಕೆಗೆ ಹೋದ ಬಳಿಕ ಹೆಸರು ಬದಲಾಯಿಸಲಾಗಿತ್ತು. ಅದಾನಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡಲಾಗಿತ್ತು,
ಹೆಸರು ಬದಲಾವಣೆಯಾದ ತಕ್ಷಣ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಕಾನೂನು ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ ಮತ್ತೆ ಹೆಸರನ್ನು ಬದಲಾಯಿಸಿ, ಈ ಹಿಂದೆ ಇದ್ದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾಯಿಸಿದೆ.
ಕಳೆದ ಕೊರೊನಾ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡಲು ಕೇಂದ್ರ ಸರ್ಕಾರ ಅದಾನಿ ಸಂಸ್ಥೆಗೆ ಗುತ್ತಿಗೆಗೆ ನೀಡಿತ್ತು. ಕೇಂದ್ರದ ಈ ನಿರ್ಧಾರಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಇದರ ನಡುವೆ ಅದಾನಿ ಸಂಸ್ಥೆ ಹೆಸರು ಬದಲಾವಣೆ ಮಾಡಿತ್ತು. ಇದರಿಂದ ರೊಚ್ಚಿಗೆದ್ದ ದಕ್ಷಿಣಕನ್ನಡ ಜಿಲ್ಲೆಯ ಜನರು ಪಕ್ಷಾತೀತವಾಗಿ ಕಾನೂನು ಹೋರಾಟ ಮಾಡಿ ಹಳೆಯ ಹೆಸರನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರ್ ಟಿ ಐ ಮೂಲಕ ದಾಖಲೆ ಪಡೆದು ನ್ಯಾಯಾಲಯದ ಮೊರೆ ಹೋಗಿದ್ದ ಸ್ಥಳೀಯರು
ಅದಾನಿ ಏರ್‌ಪೋರ್ಟ್ ಹೆಸರು ಬದಲಾವಣೆ ಮಾಡಿದ ಬಳಿಕ ವಕೀಲರ ತಂಡ ಆರ್‌ಟಿಐ ಮೂಲಕ ದಾಖಲೆ ಪತ್ರಗಳನ್ನು ಪಡೆದುಕೊಂಡಿತ್ತು. ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ, ಯಾವುದೇ ಸಂಸ್ಥೆ ನಿರ್ವಹಣೆಗಾಗಿ ಗುತ್ತಿಗೆ ಪಡೆದರೂ, ಬ್ರ್ಯಾಂಡಿಂಗ್ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಜೊತೆಗೆ ಮೂಲ ಒಪ್ಪಂದದಲ್ಲಿ ಹೆಸರು ಬದಲಾವಣೆಗೆ ಮಾಡುವುದರ ಕುರಿತು ಯಾವುದೇ ಉಲ್ಲೇಖವಿರಲಿಲ್ಲ ಎಂದು ವಕೀಲರು ತಿಳಿಸಿದ್ದರು. ಹೀಗಾಗಿ ವಕೀಲರ ಮೂಲಕ ಅದಾನಿ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಇದರ ನಡುವೆಯೇ ಪ್ರಾಧಿಕಾರವು ವಿಮಾನ ನಿಲ್ದಾಣಕ್ಕೆ ಹಳೆ ಹೆಸರು ಇಡುವಂತೆ ಸೂಚಿಸಿತ್ತು. ಇದರ ಪರಿಣಾಮ ಅದಾನಿ ಸಂಸ್ಥೆ ವಿಮಾನ ನಿಲ್ದಾಣದ ಏರ್‌ಪೋರ್ಟ್ ಪ್ರವೇಶ ದ್ವಾರ, ಒಳಭಾಗದಲ್ಲಿ ಇದ್ದ ಬೋರ್ಡ್, ಅಧಿಕೃತ ಟ್ವಿಟ್ಟರ್ ಖಾತೆ, ಫೇಸ್‌ಬುಕ್, ಗೂಗಲ್ ನಲ್ಲಿ ಹೆಸರನ್ನು ಬದಲಾಯಿಸಿದೆ.
ವಿಮಾನ ನಿಲ್ದಾಣದ ನಿರ್ವಹಣೆಗಾಗಿ ಬಂದಿದ್ದ ಅದಾನಿ ಸಂಸ್ಥೆ, ಹೆಸರು ಬದಲಾವಣೆ ಮಾಡಿದ್ದರಿಂದ ಮಂಗಳೂರು ಎಂಬ ಪದವೇ ಮಾಯವಾಗುವ ಸಾಧ್ಯತೆ ಇತ್ತು. ಅದಾನಿ ಸಂಸ್ಥೆಯೇ ಈ ವಿಮಾನ ನಿಲ್ದಾಣ ನಿರ್ಮಿಸಿದೆ ಎಂಬ ಅಭಿಪ್ರಾಯ ಬಿಂಬಿತವಾಗುವ ಸಾಧ್ಯತೆ ಇದ್ದುದ್ದರಿಂದ ಕಾನೂನು ಹೋರಾಟ ಮಾಡಲಾಗಿತ್ತು. ಇದಕ್ಕೆ ಜಯ ಸಿಕ್ಕಿದ್ದು ಏರ್ಪೋರ್ಟ‌್‌ಗೆ ಮತ್ತೆ ಹಳೆ ಹೆಸರು ಬಂದಿದೆ ಎಂದು ವಕೀಲರು ತಿಳಿಸಿದ್ದಾರೆ.