ಕೇಂದ್ರದ ಮಾಜಿ ಸಚಿವ ಅಸ್ಕರ್ ಫೆರ್ನಾಂಡಿಸ್ ಅಗಲಿಕೆಗೆ ಗಣ್ಯರ ಸಂತಾಪ

ಬೆಂಗಳೂರು : ಕೇಂದ್ರದ ಮಾಜಿ ಸಚಿವ,ಕಾಂಗ್ರೆಸ್ ನ ಹಿರಿಯ ಮುಖಂಡ ಅಸ್ಕರ್ ಫೆರ್ನಾಂಡಿಸ್ ಅವರ ನಿಧನಕ್ಕೆ ಪಕ್ಷಾತೀತವಾಗಿ ಗಣ್ಯರು ತಮ್ಮ ಸಂತಾಪ ಸೂಚಿಸಿದ್ದಾರೆ.

ಆಸ್ಕರ್ ಫರ್ನಾಂಡಿಸ್ ಒಬ್ಬ ಧೀಮಂತ ನಾಯಕ, ಕಾಂಗ್ರೆಸ್ ಕಷ್ಟದಲ್ಲಿದ್ದಾಗ ಎರಡು ಬಾರಿ ಅಧ್ಯಕ್ಷರಾಗಿದ್ದರು, ಸರಳತೆಗೆ,  ಗಾಂಧಿ ತತ್ವಕ್ಕೆ ಆಸ್ಕರ್ ಫರ್ನಾಂಡಿಸ್ ಹೇಳಿ ಮಾಡಿಸಿದ ವ್ಯಕ್ತಿತ್ವ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.  ಸಂಜೆ ನಾಲ್ಕು ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ಇಟ್ಡಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಅಸ್ಕರ್ ಅವರ ಅಗಲಿಕೆ ನಮಗೆ ನೋವು ‌ತಂದಿದೆ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿ ಬಂದವರು, ಹಲವು ಸ್ಥಾನ ಮಾನಗಳನ್ನ ನಿಭಾಯಿಸಿದವರು, ಎಲ್ಲ ಪಕ್ಷಗಳ‌ ಜೊತೆ ಪ್ರೀತಿ ವಿಶ್ವಾಸದಿಂದಿದ್ದರು, ಕಾರ್ಮಿಕರಿಗೆ ಹಲವು ‌ಯೋಜನೆ ತರಲು ಕಾರಣರಾದವರು, ಶಿರಾಡಿ ಘಾಟ್ ರಸ್ತೆ ನಿರ್ಮಾಣಕ್ಕೆ ಕಾರಣರಾದವರು, ರಾಜಕೀಯ‌ ಮಾರ್ಗದರ್ಶಕರಾಗಿದ್ದರು ನಮ್ಮೊಂದಿಗೆ ಇಲ್ಲ ಎಂದು ಮಾಜಿ ಸಚಿವ ಯು ಟಿ ಖಾದರ್ ಸಂತಾಪ ಸೂಚಿಸಿದ್ದಾರೆ.

ಕಾರ್ಮಿಕ ಸಚಿವರಾಗಿದ್ದರು, ಕಾರ್ಮಿಕರಿಗಾಗಿ ಹಲವು ಯೋಜನೆ ತಂದಿದ್ದರು, ಯುವಕರಲ್ಲಿ ಯುವಕರಾಗಿರುತ್ತಿದ್ದರು, ರಾಜ್ಯದ ಎಲ್ಲ ಜನರ ವಿಶ್ವಾಸಗಳಿಸಿದ್ದವರು, ನಾನು ಅವರನ್ನ ಅತ್ಯಂತ ಸಮೀಪದಿಂದ ಬಲ್ಲೆ, ನಾನು‌ ಪಕ್ಷಕ್ಕೆ ಬಂದಾಗ ದೊಡ್ಡ ಜವಾಬ್ದಾರಿ ಕೊಟ್ಟಿದ್ದರು, ಅವರು ಪಕ್ಷದ ಮೇಂಟರ್ ಆಗಿದ್ದರು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಸಂತಾಪ ಸೂಚಿಸಿದ್ದಾರೆ.

ಅವರ ಸಂಘಟನಾ ಮನೋಭಾವ ದೊಡ್ಡದು, ಇಂದಿರಾ ಗಾಂಧಿಯವರ ಜೊತೆ ಕೆಲಸ ಮಾಡಿದ್ದರು, ರಾಜೀವ್, ಸೋನಿಯಾಗೂ ಬಲ ತುಂಬಿದ್ದರು, ಅಂತವರ ನಿಧನ ತುಂಬಲಾರದ ನಷ್ಟ ಎಂದು ಪಾಟೀಲ್ ತಿಳಿಸಿದ್ದಾರೆ.

ಮಾಜಿ‌ ಪರಿಷತ್ ಸದಸ್ಯ ಐವಾನ್ ಡಿಸೋಜ ಹೇಳಿಕೆ ನೀಡಿದ್ದು, ಆಸ್ಕರ್ ಫೆರ್ನಾಂಡಿಸ್ ಅಗಲಿಕೆ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟ, ಗಾಂಧಿ ಕುಟುಂಬಕ್ಕೆ ನಿಕಟ ಸಂಪರ್ಕ ಹೊಂದಿದ್ರು, ರಾಷ್ಟ್ರದ ನಾಯಕನಾಗಿ ಫೆರ್ನಾಂಡಿಸ್ ಗುರುತಿಸಿಕೊಂಡಿದ್ರು, ಕಾಂಗ್ರೆಸ್ ಪಕ್ಷಕ್ಕೂ ನಷ್ಟ ಉಂಟಾಗಿದೆ, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಐವಾನ್ ಡಿಸೋಜ ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ್ ಹೇಳಿಕೆ ನೀಡಿದ್ದು, ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ ಉತ್ತಮ ಕಾರ್ಯ ಮಾಡಿದ್ರು, ರಾಜ್ಯದ ಅಭಿವೃದ್ಧಿಗೂ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ, ಅವರ ಆತ್ಮಕ್ಕೆ ದೇವರು ಸದ್ಗತಿ ಕೊಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಎಸ್ ವೈ ಸಂತಾಪ

ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ನಿಧನರಾದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ. ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪನ್ನು ಬೆಳೆಸಿಕೊಂಡಿದ್ದ ಅವರು, ಸರಳ ಸಜ್ಜನ ನಾಯಕರಾಗಿ ಗುರುತಿಸಿಕೊಂಡಿದ್ದರು. ದೇವರು ಅವರಿಗೆ ಸದ್ಗತಿ ನೀಡಲಿ, ಕುಟುಂಬದವರಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ನ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು. ಲೋಕಸಭಾ ಸದಸ್ಯರಾಗಿ ರಾಜ್ಯ ಸಭಾ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು .

ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ ಉಡುಪಿಯಲ್ಲಿ ಹುಟ್ಟಿ,ನಂತರ ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದದ್ದು ಒಂದು ಸಾಹಸಗಾಥೆ ಎಂದು ಸಂತಾಪಸೂಚಿಸಿದ್ದಾರೆ.

More News