ಮಂಡ್ಯ: ವೈಯಕ್ತಿಕ ಟೀಕೆ ಬದಲು ಅಭಿವೃದ್ಧಿ ಕೆಲಸಗಳ ಬಗ್ಗೆ ಜೆಡಿಎಸ್ ಶಾಸಕರು ಮಾತನಾಡಲಿ, ಮಂಡ್ಯದ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ರೆ ಅದನ್ನು ಸ್ವಾಗತಿಸುತ್ತೇನೆ ಎಂದು ಜೆಡಿಎಸ್ ಮುಖಂಡರುಗಳಿಗೆ ಸಂಸದೆ ಸುಮಲತಾ ಅಂಬರೀಶ್ ಟಾಂಗ್ ಕೊಟ್ಟಿದ್ದಾರೆ.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ ಅವರು, ಮಂಡ್ಯದಲ್ಲಿ ದೊಡ್ಡ ದೊಡ್ಡ ಸಮಸ್ಯೆಗಳಿವೆ, ಕೊರೋನಾ ಸಂಕಷ್ಟಗಳು, ಜನರ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡಲಿ. ಅದನ್ನು ಬಿಟ್ಟು ವೈಯಕ್ತಿವಾಗಿ ನನ್ನ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದಾರೆ ಎಂದು ಟಿಕೀಸಿದರು.
ಅದನ್ನು ಬಿಟ್ಟು ಸಂಸದೆಯ ಲೇಟರ್ ಹೆಡ್ ನಲ್ಲಿ ಸುಮಲತಾ, ಅಂಬರೀಶ್, ಅಮರನಾಥ್ ಅಂತಾ ಇದೆ ಅಂತಾ, ಲೆಟರ್ ಕೆಳಗಡೆ ಯಾರ ಸಹಿ ಇದೆ, ಈ ಸಲಾ ಬೇರೆ ತರ ಸಹಿ ಮಾಡಿದ್ದಾರೆ, ಬೇರೆ ಯಾರೋ ಇವಾಗ ಸಹಿ ಮಾಡಿದ್ದಾರೆ ಎಂಬುದನ್ನು ಚರ್ಚೆ ಮಾಡುವುದನ್ನು ಬಿಟ್ಟು ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದರೆ ಒಳ್ಳೆಯದು ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಅಕ್ರಮದ ಜೊತೆಗೆ ಸಕ್ರಮ ಗಣಿಗಾರಿಕೆ ಸ್ಥಗಿತ
ಅಕ್ರಮ ಗಣಿ ಮಾಲೀಕರು ಸಕ್ರಮ ಗಣಿ ಮಾಲೀಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ. ಸಕ್ರಮವಾಗಿರುವ ಗಣಿಗಾರಿಕೆಯನ್ನು ಯಾರಿಂದಲೂ ಸಹ ನಿಲ್ಲಿಸೋಕೆ ಆಗುವುದಿಲ್ಲ, ನಮ್ಮ ಗಣಿಗಾರಿಕೆ ಪ್ರಾರಂಭವಾಗುವ ವರೆಗೆ ನೀವು ಗಣಿಗಾರಿಕೆ ನಡೆಸಬಾರದು, ನಮ್ಮನ್ನು ಗಣಿಗಾರಿಕೆ ಮಾಡಲು ಬಿಡುತ್ತಿಲ್ಲ ಎಂದರೆ ನೀವು ಮಾಡಬಾರದು ಎಂದು ಅಕ್ರಮ ಗಣಿಗಾರಿಕೆ ಮಾಲೀಕರು ಸಕ್ರಮ ಇರುವವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರ ಈ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮೈಶುಗರ್ ಪುನರಾರಂಭ ಮಾಡಬೇಕು
ಮೈಶುಗರ್ ಪುನರಾರಂಭಕ್ಕಾಗಿ ಸಕ್ಕರೆ ಸಚಿವರನ್ನು ಭೇಟಿಯಾಗಿ ಒತ್ತಾಯಿಸಿದ್ದೇನೆ, ಆದಷ್ಟು ಬೇಗ ಕಾರ್ಖಾನೆ ಪ್ರಾರಂಭ ಮಾಡಿ ಎಂದಿದ್ದೆ, ಕಾರ್ಖಾನೆ ಆರಂಭವಾಗದೇ ರೈತರಿಗೆ ತೊಂದರೆಯಾಗುತ್ತಿದೆ, ಎರಡು ವರ್ಷಗಳ ಕಾಲ ತಾಳ್ಮೆಯಿಂದ ನಾವು ಕೇಳಿದ್ದೇವೆ, ಈಗ ರೈತರಿಗೆ ಇನ್ನೂ ತಾಳ್ಮೆಯಿಂದ ಇರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಸುಮಲತಾ ತಿಳಿಸಿದರು.
ರೈತರ ತಾಳ್ಮೆಯನ್ನು ಸರ್ಕಾರ ಪರೀಕ್ಷೆ ಮಾಡುತ್ತಿದೆ, ಸರ್ಕಾರ ಕೂಡಲೇ ಯಾವ ರೀತಿಯಲ್ಲಿ ಕಾರ್ಖಾನೆ ಆರಂಭಿಸುತ್ತದೆ ಎನ್ನುವುದನ್ನು ಹೇಳಬೇಕು, ಇದರ ಹಿಂದೆ ಬಲವಾದ ರಾಜಕೀಯ ಪ್ರಭಾವ ಇರುವ ಕಾರಣ ಇಷ್ಟು ವರ್ಷ ಕಾರ್ಖಾನೆ ಆರಂಭವಾಗಿಲ್ಲ ಎಂದು ಆರೋಪಿಸಿದ ಅವರು, ರೈತರ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಸುಮಲತಾ ಅಂಬರೀಷ್ ಅಭಿಪ್ರಾಯಪಟ್ಟರು.