ಬೆಂಗಳೂರು :ಕಳೆದ ಆರು ತಿಂಗಳ ಅವಧಿಯಲ್ಲಿ ಅಗಲಿದ ಮಾಜಿ ಸಚಿವರು,ಮಾಜಿ ಸಂಸದರು, ಉಭಯ ಸದನಗಳ ಸದಸ್ಯರು, ಮಾಜಿ ಸದಸ್ಯರು,ಸಾಹಿತಿ,ಕಲಾವಿದರು,ಶಿಕ್ಷಣ ತಜ್ಞರು,ಸಮಾಜ ಸೇವಕರು ನಾಡು-ನುಡಿ,ಸಂಸ್ಕೃತಿ,ಭಾಷೆಗೆ ಸಲ್ಲಿಸಿರುವ ಸೇವೆ, ನೀಡಿದ ಕೊಡುಗೆಗಳನ್ನು ವಿಧಾನ ಮಂಡಲದ ಉಭಯ ಸದನಗಳ ಸದಸ್ಯರು ಸ್ಮರಿಸಿಕೊಂಡು,ಸಂತಾಪ ವ್ಯಕ್ತಪಡಿಸಿದರು.
ವಿಧಾನಸಭೆಯ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಮ್ಮೆಲೇ 32 ಕ್ಕೂ ಹೆಚ್ಚು ಅಗಲಿದ ಗಣ್ಯರಿಗೆ ಸದನದಲ್ಲಿ ಭಾವ ಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಮೊದಲು ೨೦೦೬ರಲ್ಲಿ ೨೬ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿತ್ತು.ತದನಂತರ ಒಂದೇ ಬಾರಿಗೆ ೩೨ಕ್ಕೂ ಹೆಚ್ಚು ಮಂದಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು ಇದೇ ಮೊದಲ ಬಾರಿಯಾಗಿದೆ.

ಮಳೆಗಾಲ ಅಧಿವೇಶನದ ಮೊದಲ ದಿನವಾದ ಸೋಮವಾರ ಬೆಳಗ್ಗೆ ೧೧ ಗಂಟೆಗೆ ಸರಿಯಾಗಿ ಸದನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂತಾಪ ಸೂಚಿ ಸುವ ನಿರ್ಣಯವನ್ನು ಮಂಡಿಸಿದರು.ಸಭಾಧ್ಯಕ್ಷರು ಸೂಚಿಸಿದ ಸಂತಾಪ ನಿರ್ಣಯಕ್ಕೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ,ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ,ಕಾನೂನು ಮತ್ತು ಸಂಸದೀ ಯ ಸಚಿವ ಜೆ.ಸಿ.ಮಾಧುಸ್ವಾಮಿ,ಕೃಷಿ ಸಚಿವ ಬಿ.ಸಿ.ಪಾಟೀಲ್,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶೆಂಪೂರ,ಕಾಂಗ್ರೆಸ್ ಸದಸ್ಯರಾದ ಡಿ.ಕೆ.ಶಿವಕುಮಾರ್,ಎಚ್.ಕೆ.ಪಾಟೀಲ್ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಹಿರಿಯ ನಾಯಕ ಮತ್ತು ಶಾಸಕ ಸಿ.ಎಂ.ಉದಾಸಿ,ಮಾಜಿ ಸಭಾಧ್ಯಕ್ಷ ಕೃಷ್ಣ,ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ,ಮಾಜಿ ಸಚಿವರಾದ ಎಂ.ರಾಜಗೋಪಾಲ್,ಜಿ.ಮಾದೇಗೌಡ,ಕೆ.ಬಿ.ಶಾಣ ಪ್ಪ,ಮುಮ್ತಾಜ್ ಅಲಿಖಾನ್,ಎ.ಕೆ.ಅಬ್ದುಲ್ ಸಮದ್,ಮಾಜಿ ಸಂಸದ ಎಸ್.ಬಿ.ಸಿದ್ನಾಳ್,ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕವಿ ಡಾ.ಸಿದ್ದಲಿಂಗಯ್ಯ,ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆ ಸ್ವಾಮಿ,ಕನ್ನಡ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ಉಭಯ ಸದನದಲ್ಲಿ ಸಂತಾಪ ಸೂಚಿಸಲಾಯಿತು.
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್,ಮಾಜಿ ಶಾಸಕ ರೇವಣಸಿದ್ದಪ್ಪ ಕಲ್ಲೂರ, ಸದಾಶಿವರಾವ ಬಾಪುಸಾಹೇಬ ಭೋಸಲೆ,ಡಾ.ಚಿತ್ತರಂಜನ್ ಕಲಕೋಟಿ,ಡಾ.ಪಿ.ಜೆ.ಜೇಕಬ್, ಸೈಯದ್ ಜುಲಫೀಕರ್ ಹಶ್ಮಿ,ಮಹಮ್ಮದ್ ಲೈಕೊದ್ದೀನ್,ಮನೋಹರ ಕಟ್ಟೀಮನಿ,ಎನ್.ಎಸ್. ಖೇಡ್,ಸೂ.ರಂ.ರಾಮಯ್ಯ,ರಾಜಶೇಖರ್ ಸಿಂಧೂರ,ಪತ್ರಕರ್ತ ಮಹದೇವ ಪ್ರಕಾಶ್,ನ್ಯಾ.ಮೋಹನ ಶಾಂತ ನ ಗೌಡರ್,ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ,ಶಿಕ್ಷಣ ತಜ್ಞ ಪ್ರೊ.ಎಂ.ಐ.ಸವದತ್ತಿ,ಪರಿಸರ ಹೋರಾಟಗಾರ ಸುಂದರ್‌ಲಾಲ್ ಬಹುಗುಣ,ಕ್ರೀಡಾಪಟು ಮಿಲ್ಖಾ ಸಿಂಗ್,ನಟಿ ಜಯಂತಿ,ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾ ಧಿರಾಜ ತೀರ್ಥ ಶ್ರೀಪಾದ ವಡೇರ್,ಸಾಹಿತಿ ಡಾ.ವಸಂತ ಕುಷ್ಟಗಿ ಮತ್ತು ಕೋವಿಡ್ ಎರಡನೇ ಅಲೆಯಿಂದಾಗಿ ಹಾಗೂ ಅತಿವೃಷ್ಟಿ ಯಿಂದ ನಿಧನ ಹೊಂದಿದವರಿಗೆ ವಿಧಾನಸಭೆಯು ವಿಷಾದ ವ್ಯಕ್ತಪಡಿಸಿತು.

೨೬ ಗಣ್ಯರಿಗೆ ಸಂತಾಪ : ವಿಧಾನಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಮಂಡಿಸಿದ ಸಂತಾಪ ಸೂಚನೆಗೆ ಬೆಂಬಲ ವ್ಯಕ್ತಪಡಿಸಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಗಣ್ಯರು ನಾಡಿಗೆ ನೀಡಿದ ಸೇವೆ, ಅವರೊಂದಿಗೆ ಹೊಂದಿದ್ದ ಸ್ನೇಹ-ಸಂಬಂಧಗಳನ್ನು ಸ್ಮರಿಸಿಕೊಂಡರು.ಸೋಮವಾರ ನಿಧನರಾದ ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಪರಿಷತ್ ಮಾಜಿ ಸದಸ್ಯ ಎಸ್.ಎಂ.ಆನಂದ್,ಹಿರಿಯ ವಿದ್ವಾಂಸ ಡಾ.ಲಕ್ಷ್ಮೀ ತಾತಾಚಾರ,ಕವಿ ಜರಗನಹಳ್ಳಿ ಶಿವಶಂಕರ್, ಶಿಲ್ಪ ಕಲಾವಿದ ಷಣ್ಮುಖಪ್ಪ ಕಾಶಪ್ಪ ಯರಕರ, ಶಿಲ್ಪ ಕಲಾವಿದೆ ಕನಕ ಮೂರ್ತಿ,ಚಿತ್ರ ಕಲಾವಿದ ಶಂಖನಾದ ಅರವಿಂದ,ಸಂಚಾರಿ ವಿಜಯ್,ನೃತ್ಯ ಕಲಾವಿದೆ ಬಿ.ಭಾನುಮತಿ ಸೇರಿದಂತೆ ೨೬ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಮುಖ್ಯಮಂತ್ರಿಯಾಗಿ ಮೊದಲ ಅಧಿವೇಶನ ಎದುರಿಸುತ್ತಿರುವ ಬಸವರಾಜ ಬೊಮ್ಮಾಯಿ ೩೨ಕ್ಕೂ ಹೆಚ್ಚು ಗಣ್ಯರಿಗೆ ಸಂತಾಪ ಸೂಚಿಸಿದರು.ಮಾಜಿ ಸಚಿವ ಸಿ.ಎಂ.ಉದಾಸಿ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ,ಬಹಳ ಅರ್ಥಪೂರ್ಣ ಹಾಸ್ಯ ಭರಿತವಾಗಿ ಉದಾಸಿ ಅವರು ಮಾತನಾಡುತ್ತಿದ್ದರು.ಅವರು ಹಸ್ತಾಕ್ಷರ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಪ್ರಿಂಟ್ ಮಾಡಿದ ರೀತಿ ಇರುತ್ತಿತ್ತು. ಹಾವೇರಿ ಜಿಲ್ಲೆಯಾಗಲು ಉದಾಸಿ ಅವರು ಪ್ರಮುಖ ಪಾತ್ರವಹಿಸಿದ್ದರು.ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಮನ ವೊಲಿಕೆ ಮಾಡಿ ಹಾವೇರಿ ಜಿಲ್ಲೆಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಿದ್ದರು.ಅಂತೆಯೇ ಮಾಜಿ ಸಭ್ಯಾಧ್ಯಕ್ಷ ಕೃಷ್ಣಾ ಅವರು ನಂಬಿರುವ ಸಿದ್ಧಾಂತದಲ್ಲಿ ಎಂದಿಗೂ ರಾಜೀಯಾಗಲೇ ಇಲ್ಲ.ಒಂದು ವೇಳೆ ರಾಜೀಯಾಗಿದ್ದರೆ ಹಲವು ಸ್ಥಾನಗಳನ್ನು ಅಲಂಕರಿಸಬಹುದಾಗಿತ್ತು ಎಂದು ತಿಳಿಸಿದರು.
ಉದಾಸಿ ಭಾಷಾ ಜ್ಞಾನ ನೆನೆಪಿಸಿಕೊಂಡ ಸದನ : ಕನ್ನಡ,ಇಂಗ್ಲೀಷ್,ತೆಲುಗು ಸೇರಿದಂತೆ ಏಳು ಭಾಷೆಗಳಲ್ಲಿ ಲೀಲಾಜಾಲವಾಗಿ ಮಾತನಾಡಿದ್ದ ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಭಾಷಾ ಜ್ಞಾನವನ್ನು ಇಡೀ ಸದನವೇ ನೆನಪಿಸಿಕೊಂಡು ಮೆಚ್ಚುಗೆ ವ್ಯಕ್ತಪ ಡಿಸಿತು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಏಳು ಭಾಷೆಗಳ ಮೇಲೆ ಉದಾಸಿ ಅವರು ಹಿಡಿತವನ್ನು ಸಾಧಿಸಿದ್ದರು. ಅಷ್ಟೇ ಅಲ್ಲದೇ,ಸಾಮಾನ್ಯ ಜ್ಞಾನದ ಮೇಲೆ ರಾಜಕಾರಣ ಮಾಡಿದವರು ಮತ್ತು ಕಲಿಯುವ ಆಸಕ್ತಿಯನ್ನು ಬಹಳ ಇಟ್ಟಕೊಂಡಿ ದ್ದರು.ಉರ್ದು ಭಾಷೆಯನ್ನು ಮಾತನಾಡುತ್ತಿದ್ದ ಅವರು ಆಸ್ಪತ್ರೆಯಲ್ಲಿ ದಾಖಲಾಗಿ ೧೦ ದಿನ ಚಿಕಿತ್ಸೆ ಪಡೆದ ವೇಳೆ ಉರ್ದು ಭಾಷೆಯನ್ನು ಬರೆ ಯಲು ಸಹ ಕಲಿತರು ಎಂದು ಹೇಳಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ,ಓದಿದ್ದು ಕಡಿಮೆಯಾದರೂ ಉದಾಸಿ ಅವರಿಗೆ ಅಪಾರವಾದ ಭಾಷಾ ಜ್ಞಾನ ಇತ್ತು.ಗ್ರಹಿಕಾ ಶಕ್ತಿಯೂ ಅವರಿಗೆ ಉತ್ತಮವಾಗಿತ್ತು.ಏಳು ಭಾಷೆ ಗಳನ್ನು ಬಲ್ಲವರಾಗಿದ್ದ ಅವರನ್ನು ಇಷ್ಟು ಭಾಷೆ ಹೇಗೆ ಕಲಿತಿರಿ ಎಂದು ಅವರನ್ನು ಕೇಳಿದ್ದೆ. ಅದಕ್ಕೆ ಅವರು,ನಾನು ಭತ್ತದ ವ್ಯಾಪಾರಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ಹೋಗುತ್ತಿದ್ದ ವೇಳೆ ಅಲ್ಲಿನ ಭಾಷೆಯನ್ನು ಕಲಿಯುತ್ತಿದ್ದೆ ಎಂದಿದ್ದರು.ನನಗೆ ಕನ್ನಡ,ಇಂಗ್ಲೀಷ್ ಬಿಟ್ಟರೆ ಬೇರೆ ಭಾಷೆ ಬರಲ್ಲ.ಈವರೆವಿಗೂ ಹಿಂದಿ ಕಲಿಯಲು ಸಾಧ್ಯವಾಗಲಿಲ್ಲ ಎಂದು ಉದಾಸಿ ಅವರ ಭಾಷಾ ಜ್ಞಾನವನ್ನು ಮುಕ್ತಕಠದಿಂದ ಪ್ರಶಂಸಿಸಿದರು.