ಬೆಳಗಾವಿ: ಸವದತ್ತಿ ತಾಲೂಕಿಗೆ ಕುಡಿಯುವ ನೀರು ಪೂರೈಸುವ ಏಕೈಕ ಮೂಲ ಮಲಪ್ರಭಾ ನದಿ. ಮಲಪ್ರಭಾ ನದಿಯ ಬಳಿ ಚಾಕ್‌ವೆಲ್ ನಿರ್ಮಿಸಿದ್ದರೂ ನದಿಯಲ್ಲಿ ನೀರು ಸಮರ್ಪಕವಾಗಿದ್ದರೂ ಪ್ರಸ್ತುತ 8-10 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಇಲ್ಲಿನ ಜನರು ಕುಡಿಯುವ ನೀರಿಗಾಗಿ ಪ್ರತಿದಿನ ಪರಿತಪಿಸುವಂತಾಗಿದೆ.
ಪಕ್ಕದಲ್ಲೇ ನವಿಲು ತೀರ್ಥ ಡ್ಯಾಂ ಇದ್ದರೂ ಸವದತ್ತಿ ನಗರಕ್ಕೆ ಮಾತ್ರ ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಇನ್ನೂ ಜಾಕ್‌ವೆಲ್ ಬಳಿ ನೀರಿ ಕೊರತೆಯಾದರಂತೂ ಜನತೆಯನ್ನು ಆ ದೇವರೆ ಕಾಪಾಡಬೇಕು. ನಗರದಲ್ಲಿ ಸರಾಸರಿ 8-10 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಕೆಲವೊಮ್ಮೆ 15 ದಿನವಾದರೂ ನೀರು ಪೂರೈಕೆಯಾಗದ ಉದಾಹರಣೆಗಳಿವೆ. ಸಾರ್ವಜನಿಕರು ಅಧಿಕಾರಿಗಳು, ಶಾಸಕರಿಗೆ ಮನವಿ ನೀಡಿದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.
ಕುಡಿಯುವ ನೀರು ಪೂರೈಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಎಡವುತ್ತಿರುವ ಪುರಸಭೆ ಅಧಿಕಾರಿಗಳು ನೀರು ಪೂರೈಕೆ ವ್ಯತ್ಯಯಕ್ಕೆ ನೆಪ ಹೇಳುತ್ತಿದ್ದಾರೆ. ಪ್ರತಿ ಬಾರಿ ಸಮಸ್ಯೆ ಕಾಣಿಸಿಕೊಂಡಾಗಲೂ ಪುರಸಭೆ ಕ್ಯಾರೇ ಅನ್ನುತ್ತಿಲ್ಲ.
ಸವದತ್ತಿ ಮಲಪ್ರಭೆ ಹೊರತುಪಡಿಸಿದರೆ ನಗರ ವ್ಯಾಪ್ತಿಯಲ್ಲಿರುವ ಹಲವು ಕೊಳವೆ ಬಾವಿಗಳೇ ಆಧಾರ, ಅದರಲ್ಲೇ ಶೇ.40ರಷ್ಟು ಬತ್ತಿವೆ. ಇರುವ ಕೊಳವೆಬಾವಿಗಳಿಂದ ನೀರು ಪೂರೈಸಲು ಪುರಸಭೆ ಮಾತ್ರ ಒದ್ದಾಡುತ್ತಿದೆ.
ಶಾಸಕರ ನಡೆಗೆ ಬೇಸತ್ತ ಜನ
ಬೇಸಿಗೆಯ ಬಿಸಿಲಿನ ತಾಪದ ಜತೆಗೆ ಕುಡಿಯುವ ನೀರಿನ ಅಭಾವವೂ ಹೆಚ್ಚಾಗುತ್ತಿದೆ. ವಾರ್ಡುಗಳಲ್ಲಿ ಹಾಗೂ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಸದಾ ಎದುರಾಗುತ್ತಿದೆ. ಇನ್ನೂ ಬೇಸಿಗೆಯಲ್ಲಂತೂ ಈ ಸಮಸ್ಯೆ ವಿಪರೀತ. ಎಲ್ಲ ವಾರ್ಡುಗಳಲ್ಲಿ ನೀರಿಗೆ ಹಾಹಾಕಾರ ಎದುರಾಗುತ್ತಿದೆ. ಸವದತ್ತಿ ನಗರದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದ ಕಾರಣ ಜನ ಬೇಸತ್ತಿದ್ದಾರೆ.
ಇನ್ನು ಸ್ಥಳೀಯ ಪುರಸಭೆ ಹಾಗೂ ತಾಲೂಕು ಆಡಳಿತ ಮತ್ತು ಶಾಸಕರು ಇದರ ಬಗ್ಗೆ ಕೇಳಿದರು ಕೇಳದಂತೆ ಮಾಡಿಕೊಂಡು ಸುಮ್ಮನಿದ್ದಾರೆ. ಸುಮಾರು ೧೫ ವರ್ಷಗಳಿಂದ ಇದೇ ಸಮಸ್ಯೆಯನ್ನ ಸವದತ್ತಿ ತಾಲೂಕಿನ ಜನರು ಎದುರಿಸುತ್ತಿದ್ದು, ಇನ್ನೂ ಪರಿಹಾರ ಮಾತ್ರ ಕಂಡಿಲ್ಲಾ..
ಸ್ಥಳೀಯ ಶಾಸಕರಾದ ಆನಂದ ಮಾಮತಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿಲ್ಲ. ಕೇವಲ ಚುನಾವಣೆ ಸಂದರ್ಭದಲ್ಲಿ ಬಂದು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಸುಳ್ಳು ಭರವಸೆ ನೀಡುತ್ತಾರೆ, ನಂತರ ಇದರ ಬಗ್ಗೆ ಗಮನಹರಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ.