ಎತ್ತಿನಹೊಳೆ ಯೋಜನೆ : ಶಾಸಕ ಪರಮೇಶ್ವರ ಹಾಗೂ ಸಚಿವ ಮಾಧುಸ್ವಾಮಿ ನಡುವೆ ವಾಗ್ವಾದ

ಬೆಂಗಳೂರು: ಎತ್ತಿನಹೊಳೆ ಯೋಜನೆ ಸಂಬಂಧ ವಿಧಾನ ಸಭೆಯಲ್ಲಿ  ಇಂದು ಶಾಸಕ ಜಿ ಪರಮೇಶ್ವರ್ ಹಾಗೂ ಸಚಿವ ಮಾಧುಸ್ವಾಮಿ ನಡುವೆ ವಾಗ್ವಾದ ನಡೆಯಿತು. ಯೋಜನೆ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಜಿ ಪರಮೇಶ್ವರ್ ಸರ್ಕಾರವನ್ನು ಒತ್ತಾಯಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಎತ್ತಿನಹೊಳೆ ಯೋಜನೆ ವಿಚಾರವನ್ನು ಕಾಂಗ್ರೆಸ್ ಶಾಸಕ ಜಿ.ಪರಮೇಶ್ವರ್ ಪ್ರಸ್ತಾಪಿಸಿದರು. ಇದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉತ್ತರ ನೀಡಿದರು. ಮೊದಲಿಗೆ ಈ ಯೋಜನೆಗೆ ೧೨೯೦೦ ಕೋಟಿ ಮೀಸಲಿಡಲಾಗಿತ್ತು, ಆದರೆ ಈಗ ಅದೇ ಯೋಜನೆ ೨೬ ಸಾವಿರಕ್ಕೇರಿದೆ ಎಂದು ವಿವರಿಸಿದರು.

೩೯ ಎಕರೆ ಜಮೀನು ಹೆಚ್ಚುವರಿ ಬೇಕಾಗಿದೆ, ಇದರ ಬಗ್ಗೆ ಡಿಸಿ ಮತ್ತು ಸ್ವಾಧೀನಾಧಿಕಾರಿಗೆ ಹೇಳಿ ಬಂದಿದ್ದೆವು ಇದು ಮುಗಿದ ತಕ್ಷಣ ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

ಇದಕ್ಕೆ ಪರಮೇಶ್ವರ್ ಕಳೆದ ೯ ವರ್ಷಗಳಿಂದ ಯೋಜನೆ ಕಾರ್ಯಗತವಾಗಿಲ್ಲ, ಜಮೀನು ಭೂ ಸ್ವಾಧೀನ ಸಾಧ್ಯವಾಗ್ತಿಲ್ಲ, ಸ್ವಾಧೀನದ ಹೆಸರೇಳಿ ಯೋಜನೆ ದಾರಿತಪ್ಪಿಸುವುದು ಸರಿಯಲ್ಲ ಎಂದು ಪರಮೇಶ್ವರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕ  ರಮೇಶ್ ಕುಮಾರ್ ಕೂಡ ಬೆಂಬಲ ವ್ಯಕ್ತಪಡಿಸಿದರು.

ಪೈಪ್ ಲೈನ್ ಆಗಿದೆ, ಯೋಜನೆ ನಡೆದಿದೆ, ಹತ್ತಿರಕ್ಕೆ ಬಂದಾಗ ಯೋಜನೆ ನಿಂತಿರುವುದಕ್ಕೆ ಕಾರಣವೇನು ಎಂದು ರಮೇಶ್ ಕುಮಾರ್ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಧುಸ್ವಾಮಿ ಮತ್ತು ಪರಮೇಶ್ವರ್ ನಡುವೆ ಏರುಧ್ವನಿಯಲ್ಲಿ ಮಾತಿನ ಸಮರ ನಡೆಯಿತು.  

More News

You cannot copy content of this page