ಬೆಂಗಳೂರು : ದೇಶದ ಯುವ ಸಮೂಹ ಸೇರಿದಂತೆ ಎಲ್ಲಾ ವರ್ಗಗಳನ್ನು ಅತೀವ ಸಂಕಷ್ಟಕ್ಕೆ ದೂಡಿ, ನಿರುದ್ಯೋಗ ಸಮಸ್ಯೆ ನಿವಾರಿಸಲು ವಿಫಲವಾಗಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ವಿರುದ್ಧ ಪ್ರದೇಶ ಯುವ ಕಾಂಗ್ರೆಸ್ ನಿಂದ ರಾಷ್ಟ್ರೀಯ ನಿರುದ್ಯೋಗ ದಿನ ಆಚರಣೆ ಮಾಡಲಾಯಿತು.
ನರೇಂದ್ರ ಮೋದಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಕೇಂದ್ರ ಸರ್ಕಾರದ ವಿರುದ್ಧ ಯುವ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ನಡೆಯಿತು.
ಯುವ ಜನತೆ, ಕಾರ್ಮಿಕರು, ಉದ್ಯೋಗ ಕಳೆದುಕೊಂಡವರ ಧ್ವನಿಯಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. ಉದ್ಯೋಗ ಸೃಷ್ಟಿ ಮತ್ತು ಉದ್ಯೋಗ ನಷ್ಟ ತಪ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶ್ವಾಸನೆ ಕಾಗದಗಳಲ್ಲೇ ಉಳಿದಿದೆ. ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ಕೇಂದ್ರ ಸರ್ಕಾರ ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ. ಸಣ್ಣ ಮತ್ತು ಮದ್ಯಮ ಉದ್ಯಮ ನೆಲಕಚ್ಚುವಂತೆ ಮಾಡಿದ್ದು, ಇದರ ಪರಿಣಾಮ ಜನ ಜೀವನ ತೀವ್ರ ಬಾಧಿತವಾಗಿದೆ. ದೇಶದ ಎಲ್ಲಾ ಸಂಕಟಗಳಿಗೂ ಮೋದಿ ಸರ್ಕಾರವೇ ಕಾರಣ ಎಂದು ಆಪಾದಿಸಿದರು.