ಕಲಬುರಗಿ: ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿಯಾಗಿ ಕೆಕೆಆರ್ ಡಿಬಿ ಮಂಡಳಿಗೆ 1500 ಕೋಟಿ ರೂಪಾಯಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಈ ಹಣ ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸದ್ಬಳಕೆಯಾಗಬೇಕು, ಪ್ರತಿ ಮೂರು ತಿಂಗಳಿಗೊಮ್ಮೆ ಕೆಕೆಆರ್‌ಡಿಬಿ ಮತ್ತು ನಂಜುಂಡಪ್ಪ ವರದಿ ಜಾರಿ ಕುರಿತು ಖುದ್ದಾಗಿ ಪರಿಶೀಲನೆ ಮಾಡಲಾಗುವುದು ಎಂದು ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕಲಬುರಗಿ ನಗರ ಡಿಆರ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ಈ ವಿಷಯ ತಿಳಿಸಿದರು.
ಸಿಮೆಂಟ್ ಕಂಪನಿಗಳಿಗೆ ಎಚ್ಚರಿಕೆ ನೀಡಿದ ಸಿಎಂ
ಯಾದಗಿರಿಯಲ್ಲಿ ಫಾರ್ಮ ಪಾರ್ಕ್ ಮಾಡಲು ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗುವುದು, ಕಲಬುರಗಿ ಜಿಲ್ಲೆಯನ್ನ ಸಿಮೆಂಟ್ ನಗರಿ ಅಂತಾ ಕರೆಯುತ್ತಾರೆ, ಆದರೆ ಈ ಭಾಗದ ಜನರಿಗೆ ಸಿಮೆಂಟ್ ಕಂಪನಿಗಳಿಂದ ಲಾಭವಾಗುತ್ತಿಲ್ಲ, ಈ ಭಾಗದ ನೆಲ ಜಲ ಸಂಪತ್ತು ಬಳಸಿಕೊಂಡು ಸಿಮೆಂಟ್ ಕಂಪನಿಗಳು ಶ್ರೀಮಂತವಾಗಿವೆ, ಸಿಮೆಂಟ್ ಕಂಪನಿಗಳು ಜನರಿಗೆ ಸಹಾಯ ಮಾಡಲೇಬೇಕು, ಇಲ್ಲಾಂದ್ರೆ ಸಿಮೆಂಟ್ ಕಂಪನಿಗಳು ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಕರ್ನಾಟಕದ ಏಕೀಕರಣಕ್ಕೆ ಹಿರಿಯರ ಪಾತ್ರ ದೊಡ್ಡದು. ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನವ ಕರ್ನಾಟಕ ನಿರ್ಮಾಣವೇ ತಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆ ದೇಶಕ್ಕೆ ಅಪಾರವಾದದ್ದು, ಅವರು ಹಾಕಿರುವ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಕರೆನೀಡಿದರು.