ಬೆಂಗಳೂರು : ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಎಲ್ಲಾ ವಿಭಾಗದ ಸಾರಿಗೆ ನೌಕರರ ಫೆಡರೇಷನ್ ಸೋಮವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ. ಈ ಪ್ರತಿಭಟನೆಯಲ್ಲಿ ಕೆಲಸದಿಂದ ವಜಾಗೊಂಡಿರುವ 2500 ನೌಕರರು ಹಾಗೂ ಇನ್ನಿತರ ಸಂಘಟನೆಗಳ ನೌಕರರು ಪಾಲ್ಗೊಳ್ಳುವುದರಿಂದ ಸರ್ಕಾರಿ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ನಗರದ ಸ್ವಾತಂತ್ರ ಉದ್ಯಾನವನದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಗಳ ಕಿರುಕುಳಕ್ಕೆ ಒಳಗಾದವರು ವೇತನ ಪಡೆಯದೇ ಇರುವವರು, ಅಮಾನತ್ತುಗೊಂಡವರು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ಫೆಡರೇಷನ್ ಅಧ್ಯಕ್ಷ ಹೆಚ್ ಎಸ್ ಮಂಜುನಾಥ್ ತಿಳಿಸಿದ್ದಾರೆ.
ಕಳೆದ ಎಪ್ರಿಲ್ ತಿಂಗಳಲ್ಲಿ ಕರ್ನಾಟಕದ ನಾಲ್ಕು ನಿಗಮದ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಮುಷ್ಕರ ನಡೆಸಿದ್ದರು. ಅಂದು ಸುಮಾರು 2500 ಸಾವಿರ ಕಾರ್ಮಿಕರನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಹಾಗೆಯೇ ನೂರಾರು ನೌಕರರನ್ನು ದೂರದ ಊರಿಗೆ ವರ್ಗಾವಣೆ ಮಾಡಲಾಗಿತ್ತು. ಶಿಸ್ತು ಪ್ರಕ್ರಿಯ ಅಂತಾ ಅಧಿಕಾರಿಗಳು ದಿನ ದೂಡುತ್ತಿದ್ದಾರೆ, ಅನೇಕರ ವೇತನ ತಡೆಹಿಡಿಯಲಾಗಿದೆ ಈ ಎಲ್ಲಾರೂ ಈ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಂಜುನಾಥ್ ತಿಳಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳಿಗೆ, ಸಚಿವರಿಗೆ ಈ ಸಂಬಂಧ ಅನೇಕ ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಳೆದ 5 ತಿಂಗಳಿಂದ ಈ ನೌಕರರ ಕುಟುಂಬ ಆರ್ಥಿಕ ಸಂಕಷ್ಠ ಎದುರಿಸುತ್ತಿದೆ. ಆದ್ದರಿಂದ ಇವರೆಲ್ಲರನ್ನೂ ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ಮಂಜುನಾಥ್ ಆಗ್ರಹಿಸಿದ್ದಾರೆ.




