ಬೆಂಗಳೂರು : ಹುಡುಗಿಯನ್ನು ಡ್ರಾಪ್ ಮಾಡುತ್ತಿದ್ದ ವೇಳೆ ಯುವಕನ ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರಿ ಸುಮಾರು ಒಂಭತ್ತು ಗಂಟೆಯಲ್ಲಿ ನಡೆದ ಈ ಘಟನೆಯನ್ನು ಸುಮಾರು 12 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಸುದ್ದುಗಂಟೆಪಾಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಆಗ್ನೇಯ ವಲಯ ಡಿಸಿಪಿ ತಿಳಿಸಿದ್ದಾರೆ.

ಹೊಸೂರು ರಸ್ತೆಯ ಡೈರಿ ವೃತ್ತದ ಹತ್ತಿರ ರಾತ್ರಿ ಸುಮಾರು 9 ಗಂಟೆಗೆ ಹುಡುಗಿಯನ್ನು ಡ್ರಾಪ್ ಮಾಡಲು ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪರಿಚತರು ಬೈಕ್ ಅನ್ನು ಅಡ್ಡಗಟ್ಟಿದ್ದರು. ಯುವಕ, ಯುವತಿಯನ್ನು ನಿಂದಿಸಿ, ಅವರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಎಂ ಶ್ಲಾಘನೆ
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕ್ರಮವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಕ್ತ ಕಂಠದಿಂದ ಶ್ವಾಘಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಪೊಲೀಸರ ಕ್ರಮವನ್ನು ಶ್ಲಾಘಿಸಿದ್ದು, ಇಂತಹ ಘಟನೆಗಳನ್ನು ನಮ್ಮ ಸರ್ಕಾರ ಸಹಿಸಲ್ಲ, ಕಠಿಣಕ್ರಮ ಕೈಗೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.