ಕೇಂದ್ರ ಸರಕಾರದ ನಿರಂತರ ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಇಂದುಬೃಹತ್ ಸೈಕಲ್ ಜಾಥಾ ನಡೆಸಿದರು. ಕೆಪಿಸಿಸಿ ಕಚೇರಿಯಿಂದ ಆರಂಭವಾದ ಮೆರವಣಿಗೆ ವಿಧಾನಸೌಧದವರೆಗೂ ನಡೆಯಿತು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಇಂಧನ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದಿನಬಳಕೆ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಇದನ್ನು ತಕ್ಷವೇ ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ ಎಂದು ತಿಳಿಸಿದರು.
ಕೆಪಿಸಿಸಿ ಮುಖಂಡರ ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ತಕ್ಷಣವೇ ಜನಸಾಮಾನ್ಯರ ಹೊರೆಯಾಗಿರುವ ಬೆಲೆ ಏರಿಕೆಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿದರು.
ಕಳೆದ ಸೋಮವಾರ ಕೆಪಿಸಿಸಿ ವತಿಯಿಂದ ಎತ್ತಿನಗಾಡಿ ಪ್ರತಿಭಟನೆ ನಡೆಸಲಾಗಿತ್ತು. ಎತ್ತಿನ ಗಾಡಿಯೇರಿ ಬಂದ ಕಾಂಗ್ರೆಸ್ ಮುಖಂಡರು ವಿಧಾನಸೌಧದ ಆವರಣದೊಳಗೆ ಪ್ರವೇಶಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾದ ವಿರುದ್ಧ ಪ್ರತಿಭಟನೆ ನಡೆಸಿದ್ದರು.
ವಿಧಾನಸೌಧಕ್ಕೆ ಆಗಮಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬಿಜೆಪಿ ಸರ್ಕಾರ ದಿನನಿತ್ಯ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ. ಜನರ ಬದುಕು ದುಸ್ಥಿತಿಗೆ ತಲುಪಿದೆ. ಯಾರಿಗೂ ಸಂಬಳ ಹೆಚ್ಚಾಗಿಲ್ಲ. ಪಿಂಚಣಿ ಹೆಚ್ಚಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಯಾರಿಗೂ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇರುವಾಗ ಅದರ ಲಾಭ ಮಾತ್ರ ಜನಸಾಮಾನ್ಯರಿಗೆ ಸಿಗುವಂತೆ ಮಾಡಿಲ್ಲ. ಪೆಟ್ರೋಲ್ ಬೆಲೆ 100 ರ ಗಡಿ ದಾಟಿದೆ, ಡೀಸೆಲ್ 94 ಆಗಿದೆ, ಅಡುಗೆ ಅನಿಲ 880 ರೂ. ಆಗಿದೆ. ಇದರಿಂದ ಇತರೆ ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚಾಗಿದೆ ಎಂದು ವಿವರಿಸಿದರು.
ಪೆಟ್ರೋಲ್ ಬೆಲೆಯಲ್ಲಿ 25 ರೂ. ಡೀಸೆಲ್ ಬೆಲೆಯಲ್ಲಿ 20 ರೂ. ಹಾಗೂ ಅಡುಗೆ ಅನಿಲದ ಬೆಲೆ 150 ರೂ. ಕಡಿಮೆ ಮಾಡಿ ಎಂದು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ. ಜನಸಾಮಾನ್ಯರು ಬೆಲೆ ಏರಿಕೆಯಿಂದ ತಮ್ಮ ತಾಳಿ, ಒಡವೆ ಮಾರಿಕೊಂಡು ಜೀವನ ಮಾಡುವ ಸ್ಥಿತಿಗೆ ತಲುಪಿದ್ದಾರೆ ಎಂದರು.
ಕೋವಿಡ್ ಸಮಯದಲ್ಲಿ ಜನರ ಆಸ್ಪತ್ರೆ ಬಿಲ್ ನೀಡಲಿಲ್ಲ, ಸತ್ತವರ ಕುಟುಂಬಕ್ಕೆ ಪರಿಹಾರ ನೀಡಲಿಲ್ಲ. ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ, ಅವರಿಗೆ ಧೈರ್ಯ ತುಂಬಲಿಲ್ಲ.
ಸರ್ಕಾರದ ಈ ಜನವಿರೋಧಿ ನೀತಿ ವಿರೋಧಿಸಿ ನಾವಿಂದು ಈ ಪ್ರತಿಭಟನೆ ಮಾಡಿದ್ದೇವೆ. ಜನರ ಪರ ಧ್ವನಿ ಎತ್ತಲು ನಾವು ಮೊನ್ನೆ ಎತ್ತಿನ ಗಾಡಿಯಲ್ಲಿ ಸದನಕ್ಕೆ ಆಗಮಿಸಿದ್ದೆವು. ಇಂದು ಸೈಕಲ್ ಮೂಲಕ ಆಗಮಿಸಿದ್ದೇವೆ. ಸರ್ಕಾರ ಬೆಲೆ ಇಳಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರಿಯಲಿದೆ. ಜನರು ಕೂಡ ಈ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಜ್ಜಾಗಬೇಕು ಎಂದು ಕರೆ ನೀಡುತ್ತೇನೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.