ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ತಾಲೂಕಿನ ಜಮೀನಿನ ಮಾರ್ಗಸೂಚಿ ಬೆಲೆಯನ್ನು ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ಬಬಲೇಶ್ವರ ತಾಲೂಕಿನ ರೈತರು ಆಗ್ರಹಿಸಿದ್ದಾರೆ.
ಬಬಲೇಶ್ವರ ತಾಲೂಕಿನ ರೈತರ ನಿಯೋಗದ ಮುಂದಾಳತ್ವ ವಹಿಸಿದ್ದ ಶಾಸಕ ಎಂಬಿ ಪಾಟೀಲ್ ಅವರು ರೈತರರೊಂದಿಗೆ ಕಂದಾಯ ಸಚಿವ ಆರ್.ಅಶೋಕ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಆಲಮಟ್ಟಿ ಆಣೆಕಟ್ಟು 524.256ಮೀ ಎತ್ತರಿಸಿ, ನೀರು ನಿಲ್ಲಿಸಿದಾಗ ಅಂದಾಜು 75 ಸಾವಿರ ಎಕರೆ ಪ್ರದೇಶದಷ್ಟು ಜಮೀನು ಮುಳುಗಡೆಯಾಗಲಿದ್ದು, ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ 14 ಗ್ರಾಮಗಳು ಮುಳುಗಡೆಯಾಗಲಿವೆ. ಈ ಹಿಂದೆ 2015-16ರಲ್ಲಿ ಮಾರ್ಗಸೂಚಿ ಬೆಲೆಯನ್ನು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮಗಳಿಗೆ ನಿಗದಿಪಡಿಸಿರುತ್ತಾರೆ. ಆದರೆ ಬಾಗಲಕೋಟೆಯ ಜಮಖಂಡಿ ಮತ್ತು ಬೀಳಗಿ ತಾಲೂಕಿನ ಮಾರ್ಗಸೂಚಿ ಪರಿಷ್ಕರಣೆ ಮಾಡಿರುತ್ತಾರೆ. ಅದರಂತೆ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ 14 ಗ್ರಾಮಗಳ ಜಮೀನುಗಳ ಮಾರ್ಗಸೂಚಿ ಪರಿಷ್ಕರಣೆ ಮಾಡುವಂತೆ ಕಂದಾಯ ಸಚಿವರಿಗೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ್ ರವರು ಮಾರ್ಗಸೂಚಿಯ ಬೆಲೆ ಮತ್ತು ಮುಳುಗಡೆಯಾಗಲಿರುವ ಭೂಪ್ರದೇಶಗಳ ವಿವರಗಳನ್ನು ಕಂದಾಯ ಸಚಿವರಿಗೆ ತಿಳಿಸಿ, ಈ ರೈತರ ಬೇಡಿಕೆ ನ್ಯಾಯಯುತವಾಗಿದ್ದು, ಮುಳುಗಡೆಯಾಗುವ ಇತರೆ ತಾಲೂಕುಗಳಿಗೆ ತಾರತಮ್ಯವಾಗದಂತೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಕೋರಿದರು.
ಮನವಿ ಸ್ವೀಕರಿಸಿದ ಕಂದಾಯ ಸಚಿವ ಆರ್.ಅಶೋಕ ಅವರು ಸಂತ್ರಸ್ಥರ ಮನವಿಯನ್ನು ಸರ್ಕಾರ ಕೂಲಕುಂಷವಾಗಿ ಪರಿಶೀಲನೆ ಮಾಡಿ ರೈತರಿಗೆ ಅನಕೂಲವಾಗುವಂತೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.




