ಫ್ಲಾಟ್ ಖರೀದಿಸುವರಿಗೆ ಸಿಹಿ ಸುದ್ದಿ : ಸ್ಟ್ಯಾಂಪ್ ಡ್ಯೂಟಿ ಶೇ 5ರಿಂದ ಶೇ.3ಕ್ಕೆ ಇಳಿಕೆ

ಬೆಂಗಳೂರು: 45 ಲಕ್ಷದವರೆಗಿನ ಫ್ಲಾಟ್ ಖರೀದಿ ಮಾಡುವವರಿಗೆ ಸಿಹಿ ಸುದ್ದಿ ನೀಡುವ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು.
ಪರಿಷತ್ ನ ಕಲಾಪದಲ್ಲಿ ವಿಧೇಯಕ ಮಂಡನೆ ಮಾಡಿದ ಕಂದಾಯ ಸಚಿವ ಆರ್.ಅಶೋಕ್, ಬಡ ಮಧ್ಯಮವರ್ಗದ ಜನರಿಗೆ ಅನುಕೂಲವಾಗಲಿ ಎಂದು ಈಗಾಗಲೇ 35 ಲಕ್ಷದರೆಗಿನ ಮನೆ ಖರೀದಿಗೆ ಇದ್ದ ಶೇ.5 ರ ಸ್ಟಾಂಪ್ ಡ್ಯೂಟಿಯನ್ನು ಶೇ. 3ಕ್ಕೆ ಇಳಿಸಲಾಗಿದೆ. ಈಗ ಅದನ್ನು 35 ಲಕ್ಷದಿಂದ 45 ಲಕ್ಷದರೆಗಿನ ಮನೆಗಳ ಖರೀದಿಗೂ ಶೇ. 5 ರ ಸ್ಟಾಂಪ್ ಡ್ಯೂಟಿಯನ್ನು ಶೇ. 3 ಕ್ಕೆ ಇಳಿಸುವಂತೆ ತಿದ್ದುಪಡಿ ಮಾಡಲಾಗಿದೆ ಎಂದು ವಿವರಣೆ ನೀಡಿದರು.
ರಾಜ್ಯದ ಎಲ್ಲಾ ನಗರಕ್ಕೂ ಇದು ಅನ್ವಯವಾಗಲಿದೆ, ಮಾರ್ಗಸೂಚಿ ದರ ಅವೈಜ್ಞಾನಿಕ ಎನ್ನುವ ಮಾತು ಸದಸ್ಯರಿಂದ ಬಂದಿದೆ, ಕೆಲವು ಕಡೆ ಅವೈಜ್ಞಾನಿಕ ಮಾರ್ಗಸೂಚಿ ದರ ಇದೆ, ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ‌ದರವೇ ಹೆಚ್ಚಿದೆ ಇಂತಹ ಸಂದರ್ಭಗಳಲ್ಲಿ ಕಳ್ಳದಾರಿ ಹೆಚ್ಚಾಗಲಿದೆ. ಅವೈಜ್ಞಾನಿಕ ಮಾರ್ಗಸೂಚಿ ದರ ಇರುವ ಕಡೆ ಸರಿಪಡಿಸುವ ಪ್ರಯತ್ನ ನಾವು ಮಾಡಲಿದ್ದೇವೆ ಎಂದು ಅಶೋಕ್ ಸದನಕ್ಕೆ ತಿಳಿಸಿದರು.
ಸದ್ಯ ಈ ಬಿಲ್ ಫ್ಲಾಟ್ ಖರೀದಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ತರಲಾಗಿದೆ ಹಾಗಾಗಿ ಬಿಲ್ ಗೆ ಅನುಮೋದನೆ ಕೊಡಿ ಎಂದು ಮನವಿ ಮಾಡಿದರು. ಬಿಲ್ ಅನ್ನು ಪಕ್ಷಾತೀತವಾಗಿ ಎಲ್ಲ ಸದಸ್ಯರು ಸ್ವಾಗತಿಸಿ ಕೆಲವು ಸಲಹೆ ನೀಡಿದರು. ನಂತರ ಧ್ವನಿಮತದ ಮೂಲಕ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್ ಅಂಗೀಕರಿಸಲಾಯಿತು.

More News