ಬೆಂಗಳೂರು: ನಾಗರಿಕ ಸಮಾಜದಲ್ಲಿ ತಲೆ ತಗ್ಗಿಸುವ ಮಾದರಿಯಲ್ಲಿ ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ನಡೆಯುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್. ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ನಲ್ಲಿ ಇಂದು ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಮೈಸೂರಿನ ಕಾಲೇಜು ವಿದ್ಯಾರ್ಥಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಎಳೆ ಎಳೆಯಾಗಿ ವಿವರಿಸಿದರು.
ವಿದ್ಯಾರ್ಥಿನಿ ಜಾಗಿಂಗ್ ಮುಗಿಸಿ ರಿಂಗ್ ರಸ್ತೆ ಬಳಿ ಕೂತಿದ್ದ ಸಂದರ್ಭದಲ್ಲಿ ಆರು ಮಂದಿ ದುಷ್ಕರ್ಮಿಗಳು ವಿದ್ಯಾರ್ಥಿನಿ ಜತೆಗಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಯುವತಿಯನ್ನು ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ. ಆದ ನಂತರ ಯುವಕನ ತಂದೆಗೆ 3 ಲಕ್ಷ ರೂ. ಹಣ ತರಿಸುವಂತೆ ಯುವಕನ ಮೂಲಕ ಕರೆ ಮಾಡಿಸುತ್ತಾರೆ.
ಈ ಪ್ರದೇಶ ಜನವಸತಿಯಿಂದ ಕೂಡಿದ್ದಾಗಿದೆ. ಈ ಭಾಗಕ್ಕೆ ಗಸ್ತು ವ್ಯವಸ್ಥೆ ಇದೆ. ಅತ್ಯಾಚಾರ ಆಗಿರುವುದು ಸ್ಪಷ್ಟವಾಗಿದ್ದರೂ, ಆಸ್ಪತ್ರೆ ವೈದ್ಯರು ಹಲ್ಲೆ ಎಂದು ಮಾಹಿತಿ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಯುವಕ ಹೇಳಿಕೆ ನೀಡಿದ್ದಾರೆ. ಆದರೆ ಯುವತಿ ಹೇಳಿಕೆ ನೀಡಿಲ್ಲ. ಪೊಲೀಸರು ಪ್ರಕರಣ ವಿಳಂಬವಾಗಿ ದಾಖಲಿಸಿದ್ದಾರೆ.
ಒಟ್ಟಾರೆ ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ ಎನ್ನುವ ಆತಂಕ ಇದೆ. ಪ್ರತಿಪಕ್ಷ ಒತ್ತಡ ಹಿನ್ನೆಲೆ ನಂತರ ಕೇಸು ದಾಖಲಿಸಲಾಗಿದೆ. ಒಟ್ಟಾರೆ ಒಂದು ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ವ್ಯವಸ್ಥಿತ ಯತ್ನ ನಡೆದಿದೆ ಎನ್ನುವ ಅನುಮಾನ ಇದೆ. ಎಫ್ಐಆರ್ ದಾಖಲಾಗುವಲ್ಲೇ 15 ಗಂಟೆ ವಿಳಂಬವಾಗಿದೆ. ಎಫ್ಐಆರ್ ದಾಖಲು ವಿಳಂಬಕ್ಕೆ ಪೊಲೀಸ್ ಇಲಾಖೆ ವಿವರಣೆ ನೀಡಬೇಕು. ಅಪರಾಧಿಗಳು ತಪ್ಪಿಸಿಕೊಳ್ಳುವ ಅವಕಾಶ ಇದೆ. ಇಷ್ಟೊಂದು ವಿಳಂಬ ಏಕೆ? ಎಂದು ಪ್ರಶ್ನಿಸಿದರು.
ಸಿಎಂ ಬಸವರಾಜ್ ಬೊಮ್ಮಾಯಿ ದಿಲ್ಲಿಯಿಂದ ಹೇಳಿಕೆ ನೀಡಿದ್ದರು. ಸಂತ್ರಸ್ತೆ ಬಗ್ಗೆ ಅಧಿಕಾರಿಗಳು ನೀಡಿದ ಮಾಹಿತಿ ಆಧರಿಸಿ ಹೇಳಿಕೆ ನೀಡಿದರು. ಇನ್ನು ಗೃಹ ಸಚಿವರು ಸಂಜೆ 7 ಗಂಟೆ ನಂತರ ತೆರಳಬಾರದಿತ್ತು ಎಂಬ ಹೇಳಿಕೆ ನೀಡಿದರು. ಪ್ರತಿ ಕ್ಷೇತ್ರದಲ್ಲೂ ಮಹಿಳೆ ಮುಂದಿದ್ದಾಳೆ. ಅಂತವರ ಬಗ್ಗೆ ಇಂತ ಹೇಳಿಕೆ ನೀಡಿದ್ದೇಕೆ. ಇದರ ನಂತರ, ಕಾಂಗ್ರೆಸ್ ನವರು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಎಂದರು. ಇಂತಹ ಪದ ಬಳಕೆ ಮಾಡಿದ್ದೇಕೆ. ಸಾವಿರಾರು ಪ್ರವಾಸಿಗರು ಬರುವ ತಾಣದಲ್ಲಿ ಇಂತಹ ಘಟನೆ ನಡೆದಿದೆ ಸ್ಥಳಕ್ಕೆ ಹೋಗಿಲ್ಲ, ಸಂತ್ರಸ್ತೆಯನ್ನು ಭೇಟಿಯಾಗಿ ಚರ್ಚಿಸಿಲ್ಲ. ಮೈಸೂರಿಗೆ ತೆರಳಿದರೂ, ಗೃಹ ಸಚಿವರು ಸ್ಥಳಕ್ಕೆ ಭೇಟಿ ನೀಡಿಲ್ಲ. ಇದು ಸರಿಯಾದ ಕ್ರಮ ಅಲ್ಲ ಎಂದರು.
ಮೈಸೂರು ಅತ್ಯಾಚಾರ ಆರೋಪಿಗಳ ಪರೇಡ್ ನಡೆಸಬೇಕು, ಐದು ತಿಂಗಳಲ್ಲಿ ಪ್ರಕರಣ ಇತ್ಯರ್ಥಪಡಿಸಬೇಕು. ಸಂತ್ರಸ್ತೆಯ ಹೇಳಿಕೆ ಪಡೆಯಬೇಕು. ಗಸ್ತು ವ್ಯವಸ್ಥೆ ಇನ್ನಷ್ಟು ಹೆಚ್ಚಬೇಕು. ಅತ್ಯಾಚಾರ ಪ್ರಕರಣಕ್ಕೆ ಪೊಲೀಸ್ ವೈಫಲ್ಯ ಕಾರಣ. ಗೃಹ ಸಚಿವರು ನೈತಿಕ ಹೊಣೆ ಹೊರಬೇಕು. ನಾನು ಗೃಹ ಸಚಿವರ ರಾಜೀನಾಮೆ ಕೊಡಿ ಎಂದು ಕೇಳಲ್ಲ. ಕೇಳಿದರೂ ಅದು ಸಾಧ್ಯವಾಗಲ್ಲ. ಆದರೆ ನೈತಿಕ ಹೊಣೆ ವಹಿಸಿ ಕ್ರೂರಿಗಳಾದ ಅತ್ಯಾಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಕಾಂಗ್ರೆಸ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಸಾಕಷ್ಟು ದೌರ್ಜನ್ಯ ನಡೆಯುತ್ತಿರುತ್ತದೆ. ಇದನ್ನು ಗಮನಿಸುವ ಕಾರ್ಯ ಆಗಬೇಕು. ನಿರ್ಧಾರವನ್ನು ಕೈಗೊಳ್ಳುವ ಸ್ಥಾನದಲ್ಲಿರುವವರು ಹೆಚ್ಚಿನ ಜವಾಬ್ದಾರಿ ಕೈಗೊಳ್ಳಬೇಕು ಎಂದರು.
ಆರ್.ಬಿ. ತಿಮ್ಮಾಪೂರ್ ಮಾತನಾಡಿ, ತಾವು ಈ ಹಿಂದೆ ಜೈಲಿನಿಂದ ತಮ್ಮವರನ್ನು ಬಿಡುಗಡೆ ಮಾಡಿಸಿಕೊಳ್ಳಲು ಲಂಚ ನೀಡಿದ್ದಾಗಿ ತಿಳಿಸಿದ್ದಾರೆ. ಇಂತವರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಈ ಘಟನೆ ಸಂಬಂಧ ಮುಖ್ಯಮಂತ್ರಿಗಳೇ ಬಂದು ಉತ್ತರಕೊಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.
ಜೆಡಿಎಸ್ ಸದಸ್ಯರಾದ ತಿಪ್ಪೇಸ್ವಾಮಿ, ಕಾಂಗ್ರೆಸ್ ಸಚೇತಕ ಎಂ. ನಾರಾಯಣಸ್ವಾಮಿ, ನಜೀರ್ ಅಹ್ಮದ್, ಯು.ಬಿ. ವೆಂಕಟೇಶ್, ಪಿ.ಆರ್. ರಮೇಶ್ ಮತ್ತಿತರ ಸದಸ್ಯರು ಮಾತನಾಡಿದರು. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸುದೀರ್ಘ ಚರ್ಚೆಗೆ ತಾವು ನಾಳೆ ಉತ್ತರ ನೀಡುವುದಾಗಿ ತಿಳಿಸಿದರು.