ಬೆಂಗಳೂರು: ರಾಜ್ಯ ಸರ್ಕಾರ ತನ್ನ ಹತ್ತು ಹಲವು ನ್ಯೂನತೆಯಿಂದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಠ ಉಂಟಾಗಿದೆ. ರಾಣಿಚೆನ್ನಮ್ಮ ವಿಶ್ವವಿದ್ಯಾಲಯ, ಬೆಂಗಳೂರು ವಿಶ್ವವಿದ್ಯಾಲಯ, ಪಶು ವೈದ್ಯಸೇವಾ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಬೇಜವಾಬ್ದಾರಿಯಿಂದ ಕೋಟ್ಯಂತರ ರೂಪಾಯಿ ನಷ್ಠವಾಗಿದೆ ಎಂದು ಸಿಎಜಿವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಾರ್ಮಿಕ ಇಲಾಖೆಯು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ನೋಂದಣಿ ನವೀಕರಣಗೊಳಿಸದೇ ಇದ್ದರಿಂದ 39.59 ಕೋಟಿ ರೂ. ವಸೂಲಾತಿಯಾಗಿಲ್ಲ ಎಂದು ಭಾರತದ ಲೆಕ್ಕನಿಯಂತ್ರಣಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿ ತಿಳಿಸಿದೆ.
ಮಾರ್ಚ್ 2020ಕ್ಕೆ ಕೊನೆಗೊಂಡ ವೆಚ್ಚಗಳ ಮತ್ತು ರಾಜಸ್ವದ ಲೆಕ್ಕಪರಿಶೋಧನೆಗೆ ಸಂಬಂಧಿಸಿದಂತೆ ವರದಿಯ ಅಧ್ಯಯನ ನಡೆಸಿದೆ. ಈ ಕುರಿತ ಅನುಪಾಲನಾ ವರದಿಯನ್ನು ಸದನದಲ್ಲಿ ಬುಧವಾರ ಸಿಎಂ ಬಸವರಾಜ ಬೊಮ್ಮಾಯಿ ಪರವಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಂಡಿಸಿದರು. ಈ ವರದಿಯಲ್ಲಿ ಕೆಲ ನ್ಯೂನತೆ, ಲೋಪದೋಷಗಳನ್ನು ಉಲ್ಲೇಖಿಸಲಾಗಿದೆ.
ಪಿಂಚಣಿ ನಿಧಿಯ ನಿಯಮ ಮತ್ತು ಅಭಿವೃದ್ಧಿ ಪ್ರಾಧಿಕಾರದ ನಿಯಮಗಳನ್ನು ರಾಷ್ಟ್ರೀಯ ಪಿಂಚಣಿ ಪದ್ಧತಿಗೆ ಅನುಗುಣವಾಗಿ ಜಾರಿಗೊಳಿಸಿಲ್ಲ. ರಾಣಿಚೆನ್ನಮ್ಮ ವಿಶ್ವವಿದ್ಯಾಲಯವು ನೀಡಿರುವ ಮಾಹಿತಿಯಂತೆ ಫೆ.2015ರಿಂದ ಸೆಪ್ಟೆಂಬರ್ 2016ರ ವರೆಗಿನ ಅವಧಿಯಲ್ಲಿ ನೌಕರರ ಮತ್ತು ಉದ್ಯೋಗೇತರ ವಂತಿಗೆಯ ಹಣ 2.40 ಕೋಟಿ ರೂ. ಹೂಡಿಕೆ ಮಾಡಿರಲಿಲ್ಲ. ಹಿಂದಿನ ವಂತಿಗೆಯೊಂದಿಗೆ ಹೂಡಿಕೆ ಮಾಡುವಲ್ಲಿ ವಿಳಂಬದಿಂದ ವಿಶ್ವವಿದ್ಯಾಲಯದ ನೌಕರರಿಗೆ 29.62 ಲಕ್ಷ ರೂ. ನಷ್ಟ ಪರಿಣಿಮಿಸಿದೆ ಎಂದು ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಸಮರ್ಪಕ ಆರ್ಥಿಕ ನಿರ್ವಣೆಯಾಗಿದ್ದು, 12.97 ಲಕ್ಷ ರೂ. ದುರುಪಯೋಗವಾಗಿರುವುದು ಕಂಡು ಬಂದಿದೆ. ಬೆಂಗಳೂರು ವಿಶ್ವವಿದ್ಯಾಲಯ 2006, ಏ.1ರ ನಂತರ ನೇಮಕಗೊಂಡ ನೌಕರರಿಗೆ ಎನ್‌ಪಿಎಸ್ ಅನ್ನು ಅಳವಡಿಸುವುದಾಗಿ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ತಿಳಿಸಿದೆ. ಮಂಗಳೂರು ವಿಶ್ವವಿದ್ಯಾಲಯವು ಯಾವುದೇ ಉತ್ತರ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಸಮರ್ಪಕ ಆರ್ಥಿಕ ನಿರ್ವಹಣೆಯಾಗಿದ್ದು, 12.97 ಲಕ್ಷ ರೂ. ದುರುಪಯೋಗವಾಗಿದೆ. ದಾಖಲೆಗಳ ತಿರುಚುವಿಕೆಯಿಂದ 1.28 ಲಕ್ಷ ರೂ. ದುರುಪಯೋಗವಾಗಿದೆ. ಪಶುಪಾಲನಾ ಮತ್ತು ಚನ್ನಪಟ್ಟಣದಲ್ಲಿ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸರ್ಕಾರದ ರಾಜಸ್ವವನ್ನು ಜಮೆ ಮಾಡದಿರುವುದರಿಂದ ಮತ್ತು ದಾಖಲೆಗಳಲ್ಲಿ ಕೈಚಳಕ ಮಾಡಿರುವುದರಿಂದ 1.38 ಲಕ್ಷ ರೂ. ದುರುಪಯೋಗವಾಗಿದೆ ಎಂದು ತಿಳಿಸಿದೆ.
ಆರೋಗ್ಯ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್ ಅವರಿಂದ ವಿಳಂಬವಾಗಿ ಪೂರ್ಣಗೊಳಿಸಿದ ಕಾಮಗಾರಿಗಳ ಮೇಲೆ ಅತ್ಯಲ್ಪ ದಂಡವನ್ನು ವಿಧಸಲಾಗಿದೆ. ಇದು 14.63 ಕೋಟಿ ರೂ.ನಷ್ಟು ಲಿಕ್ವಿಡೇಟೆಡ್ ಡ್ಯಾಮೇಜಸ್ ಕಡಿಮೆ ವಿಧಿಸಿಧ. ಜೊತೆಗೆ ಗುತ್ತಿಗೆದಾರರಿಗೆ ಲಾಭವನ್ನುಂಟು ಮಾಡಲಾಗಿದೆ ಎಂದು ವರದಿಯಲ್ಲಿ ದೂರಲಾಗಿದೆ.
7.54 ಲಕ್ಷ ಕೋಟಿ ರೂ.ನ ಒಟ್ಟು ಆಯವ್ಯಯ ವೆಚ್ಚಕ್ಕೆ ಪ್ರತಿಯಾಗಿ 2019-20ನೇ ಸಾಲಿನಲ್ಲಿ ಸಂಪನ್ಮೂಲಗಳ ಅನ್ವಯ 5.03 ಲಕ್ಷ ಕೋಟಿ ರೂ. ಇತ್ತು. ರಾಜ್ಯದ ಒಟ್ಟು ವೆಚ್ಚ 2015-16ರಿಂದ 2019-20ನೇ ಸಾಲಿನಲ್ಲಿ ಶೇ.55ರಷ್ಟು ಏರಿಕೆಯಾಗಿತ್ತು. ರಾಜಸ್ವ ವೆಚ್ಚವು ಇದೇ ಅವಧಿಯಲ್ಲಿ ಶೇ.49ರಷ್ಟು ಏರಿಕೆಯಾಗಿತ್ತು ಎಂದು ತಿಳಿಸಲಾಗಿದೆ. 2019-20ನೇ ಸಾಲಿನಲ್ಲಿ 2,491.66 ಕೋಟಿ ಮೊತ್ತದಷ್ಟು ಒಟ್ಟು ರಾಜಸ್ವ ಕಡಿಮೆ ಪ್ರಮಾಣದಲ್ಲಿ ವಿಧಿಸಿರುವುದು ಕಂಡು ಬಂದಿದೆ.
ನಗರದ ಪ್ರದೇಶದಲ್ಲಿ ಇದ್ದಂತಹ 30 ಬಾರುಗಳು ಮತ್ತು ರೆಸ್ಟೋರೆಂಟುಗಳು 2014ರ ಮಾರ್ಚ್‌ನಿಂದ 2017ರ ಮಾರ್ಚ್ ಅವಧಿಯಲ್ಲಿ ಮಾಡಿದ್ದಂತಹ ಮದ್ಯ ಮಾರಾಟಗಳ ಮೇಲೆ ಕಡಿಮೆ ಪ್ರಮಾಣದಲ್ಲಿ ವಿಧಿಸಿದ ತೆರಿಗೆಯು ಬಡ್ಡಿ ಮತ್ತು ದಂಡವೂ ಸೇರಿ 6.15 ಕೋಟಿ ರೂ.ಆಗಿದೆ ಎಂದು ವರದಿಯಲ್ಲಿ ಸಿಎಂಜೆ ಉಲ್ಲೇಖಿಸಿದೆ.
ಎರಡು ಉಪ ನೋಂದಣಿ ಅಧಿಕಾರಿಗಳ ಕಚೇರಿಗಳಲ್ಲಿ ಗುತ್ತಿ ಕಡತ, ಮಾರಾಟ- ಒಡಂಬಡಿಕೆ ಸಂಬಂಧಿಸಿದಂತೆ ತಪ್ಪು ವರ್ಗೀಕರಣ ಮಾಡಿರುವುದರಿಂದ 22.83 ಕೋಟಿ ರೂ. ದಷ್ಟು ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿದೆ. ಅದೇ ರೀತಿ ಜಂಟಿ ಅಭಿವೃದ್ಧಿ ಒಡಂಬಡಿಕೆಗಳಲ್ಲಿ ಅಸಮರ್ಪಕವಾಗಿ ಪಡೆದುಕೊಳ್ಳಲಾಗಿದೆ. ಅದರ ಆಧಾರದಲ್ಲಿ ಅಳವಡಿಸಲಾದ ತಪ್ಪು ದರ ಹಾಗೂ ನಿವೇಶನಗಳಿಗೆ ಹೆಚ್ಚಿನ ಮೌಲ್ಯಮಾಪನ ಅಳವಡಿಕೆಯಿಂದ 6.59 ಕೋಟಿ ರೂ. ಮುದ್ರಾಂಕ ಸುಂಕ ಹಾಗೂ ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.