ಶಿವರಾಮ ಕಾರಂತ ಬಡಾವಣೆ ವಿವಾದ ಪರಿಹರಿಸಲು ಸಭೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ನಿರ್ಮಾಣ ವಿವಾದ ಪರಿಹರಿಸುವ ಸಂಬಂಧ ಪ್ರತಿನಿಧಿಗಳು, ಅಧಿಕಾರಿಗಳು, ಸುಪ್ರೀಂಕೋರ್ಟ್  ನೇಮಿಸಿರುವ ಮೇಲುಸ್ತುವಾರಿ ಸಮಿತಿ ಸದಸ್ಯರನ್ನು ಒಳಗೊಂಡು ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಶಿವರಾಮ ಕಾರಂತ ಬಡಾವಣೆ ಕುರಿತು ಪರಿಷತ್ ಕಲಾಪದಲ್ಲಿ ನಿಯಮ 330 ರ ಅಡಿ ನಡೆದ ಚರ್ಚೆಗೆ ಉತ್ತರಿಸಿದ ಸಿಎಂ, ಬಡಾವಣೆ ವಿಷಯಕ್ಕೆ ಬಹಳ ದೊಡ್ಡ ಇತಿಹಾಸ ಇದೆ, ನಗರೀಕರಣ ಆಗುತ್ತಿದ್ದಂತೆ ಗ್ರಾಮಗಳ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯಲಿದೆ, ಆದರೆ ಅದಕ್ಕಾಗಿ ಒಂದು ನೀತಿಯಿಲ್ಲ, ಯಾವ ನೀತಿ ಅನುಸರಿಸಬೇಕು ಎನ್ನುವ ಸ್ಪಷ್ಟತೆ ಇಲ್ಲ, ಇದರ ಬಗ್ಗೆ ನಾವೆಲ್ಲಾ ಚಿಂತನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತರದ ಸೋಮಶೆಟ್ಡಿಹಳ್ಳಿ ಇತರೆಡೆ 3546 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ನಾಲ್ಕು ಬಡವಾಣೆ ಮಾಡಲು ಎಸ್ಎಂ ಕೃಷ್ಣ ಸರ್ಕಾರ ತೀರ್ಮಾನಿಸಿತ್ತು. ಕೆಂಪೇಗೌಡ, ಶಿವರಾಮ ಕಾರಂತ ಬಡಾವಣೆ ಉಳಿಸಿಕೊಂಡು ಇನ್ನೆರಡು ಪ್ರಸ್ತಾಪ ಕೈಬಿಡಲಾಯಿತು. ಕೆಂಪೇಗೌಡ ಬಡಾವಣೆ ಮತ್ತು ಶಿವರಾಮ ಕಾರಂತ‌ ಬಡಾವಣೆಯಲ್ಲಿ ಬಹಳಷ್ಟು ಘಟನೆಗಳು ನಡೆದಿದೆ, ಕೋರ್ಟ್ ಗಳು ಹಲವು ವಿರೋಧಾಬಾಸ ತೀರ್ಮಾನ ಕೊಟ್ಟಿವೆ, ಹಾಗಾಗಿ ಸುಪ್ರೀಂ ಮೊರೆಯೂ ಹೋಗಲಾಗಿದೆ.

2008 ರಲ್ಲಿ ಪ್ರಾಥಮಿಕ ಅಧಿಸೂಚನೆ‌ ಹೊರಡಿಸಿದ್ದನ್ನು 2015 ರಲ್ಲಿ ಹೈಕೋರ್ಟ್ ರದ್ದುಪಡಿಸಿತು, ದ್ವಿಸದಸ್ಯ ಪೀಠವೂ 2017 ರಲ್ಲಿ ಬಿಡಿಎ ಮೇಲ್ಮನವಿ ಅರ್ಜಿ ವಜಾಗೊಳಿಸಿತು, 2018 ರಲ್ಲಿ ಸುಪ್ರೀಂ ಕೋರ್ಟ್ ಮತ್ತೆ ಆದೇಶ ನೀಡಿತು. 2013 ರ ಭೂ ಸ್ವಾಧೀನ ಕಾಯ್ದೆ ಇದಕ್ಕೆ ಅನ್ವಯಿಸಲ್ಲ ಎಂದು ತೀರ್ಪು ನೀಡಿತು. ಅದರ ಅನ್ವಯ ಬಿಡಿಎಗೆ ಸರ್ಕಾರ ಒಂದು ಆದೇಶ ಮಾಡಿದೆ,ರೈತರಿಗೆ ಜಾಗಕ್ಕೆ ಬದಲಾಗಿ 60:40 ರ  ಅನುಪಾತದಂತೆ ನಿವೇಶನ ಕೊಡುವ ತೀರ್ಮಾನ ಅಥವಾ 2008 ರಂತೆ ಹಣ ಕೊಡಬಹುದು ಎನ್ನುವುದು ಈಗಿರುವ ನಿಲುವಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಸದ್ಯ ಶಿವರಾಮ ಕಾರಂತ ಬಡಾವಣೆಗೆ ಸ್ವಾಧೀನ ಪಡಿಸಿಕೊಂಡಿರುವ ಜಾಗದಲ್ಲಿ ಮನೆ, ವಾಣಿಜ್ಯ ಕಟ್ಟಡ, ಖಾಲಿ ಜಾಗ ಎಲ್ಲ ಇದೆ, ಇದನ್ನೆಲ್ಲಾ ನಿರ್ವಹಿಸಲು ಸುಪ್ರೀಂ ಕೋರ್ಟ್ ಮೂರು ಜನರ ಸಮಿತಿ ರಚಿಸಿದೆ, ಜಮೀನು, ಮನೆ, ವಾಣಿಜ್ಯ ಕಟ್ಟಡ ಸ್ವಾಧೀನ ಎಲ್ಲವೂ ಈಗ ಬಿಡಿಎ ಕೈಯಲ್ಲಿ ಇಲ್ಲ ಈ ಸಮಿತಿ ಕೈಯಲ್ಲಿದೆ. ಎಲ್ಲಾ ಸಮಿತಿಯೇ ನಿರ್ವಹಣೆ ಮಾಡಲಿದೆ.

ಉದ್ದೇಶಿತ ಬಡಾವಣೆ ಜಾಗದಲ್ಲಿ 3546 ಎಕರೆ ಸಂಪೂರ್ಣ ಲಭ್ಯವಿಲ್ಲ, ಹಲವಾರು ಮನೆ ಇವೆ, ಕೆಲ ರೈತರು ಜಾಗ ಮಾರಾಟವನ್ನೂ ಮಾಡಿದ್ದಾರೆ, ಮತ್ತೊಂದು ಕಡೆ ಇದನ್ನೆಲ್ಲಾ ನಿರ್ವಹಿಸಲು ಸುಪ್ರೀಂಕೋರ್ಟ್ ಸಮಿತಿ ಇದೆ. ಅದರ ನಂತರ ಸುಪ್ರೀಂ ಕೋರ್ಟ್ ತೀರ್ಪು ಇದೆ. ಸುಪ್ರೀಂ ಕೋರ್ಟ್ ಆದೇಶವನ್ನು ಯಾರೂ ಮೀರಲು ಸಾಧ್ಯವಿಲ್ಲ.

ಹಾಗಾಗಿ ಇದರ ಬಗ್ಗೆ ವಿಶೇಷ ಸಭೆ ಕರೆದು ಸುಪ್ರೀಂ ಕೋರ್ಟ್ ಆದೇಶ ಹೇಗೆ ಪಾಲಿಸಬೇಕು, ಯೋಗ್ಯ ಪರಿಹಾರ ನೀಡುವುದು,ಲಭ್ಯ ಜಾಗದಲ್ಲಿ ನಿವೇಶನ ಮಾಡುವುದು, ಬರುವ ಹಣದಿಂದ ಅಭಿವೃದ್ಧಿ ಮಾಡುವುದು ಸೇರಿದಂತೆ ಯಾವ ರೀತಿ ಮುಂದುವರೆಯಬೇಕು ಎನ್ನುವ ಕುರಿತು ಮೂವರು ಸದಸ್ಯರ ಸಮಿತಿಯನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕಿದೆ, ಅಲ್ಲಿನ‌ ಜನಪ್ರತಿನಿಧಿ, ಅಧಿಕಾರಿಗಳು, ಸಮಿತಿ ಸದಸ್ಯರು ಎಲ್ಲರೂ ಒಂದು ಸಭೆ ನಡೆಸಿ ಪರಿಹಾರ ಕಂಡುಕೊಳ್ಳೋಣ ಎಂದರು.

More News

You cannot copy content of this page