ರಾಜ್ಯಕ್ಕೆ ಬಂದ ಲೋಕಸಭೆ ಸಭಾಧ್ಯಕ್ಷರಿಗೆ ಅಗೌರವ ಸಲ್ಲಿಸಬಾರದು: ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಲೋಕಸಭೆ ಸಭಾಧ್ಯಕ್ಷರು ಹಾಗೂ ಅವರು ಅಲಂಕರಿಸಿರುವ ಪೀಠಕ್ಕೆ ಅಗೌರವ ತೋರಬಾರದು ಎನ್ನುವ ಒಂದೇ ಕಾರಣಕ್ಕೆ ಇಂದು ನಡೆದ ವಿಧಾನಮಂಡಲ ಜಂಟಿ ಅಧಿವೇಶನ ಕಲಾಪದಲ್ಲಿ ಜೆಡಿಎಸ್ ಪಕ್ಷದ ಶಾಸಕರು ಪಾಲ್ಗೊಂಡಿದ್ದರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳೂ ಆದ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಕಲಾಪದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, “ರಾಜ್ಯದ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು ಲೋಕಸಭೆಯ ಸಭಾಧ್ಯಕ್ಷರನ್ನು ಆಹ್ವಾನಿಸಿ ಜಂಟಿ ಅಧಿವೇಶವನ್ನು ಆಯೋಜಿಸಿದ್ದಾರೆ. ಇಂಥ ಅಪರೂಪದ ಸಂದರ್ಭದಲ್ಲಿ ಗೈರು ಹಾಜರಾಗುವುದು ಎಂದರೆ ಲೋಕಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದಂತೆ. ಹೀಗೆ ಆಗುವುದು ಬೇಡ ಹಾಗೂ ಸಂಸದೀಯ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯುವ ಏಕೈಕ ಉದ್ದೇಶದಿಂದ ಕಲಾಪದಲ್ಲಿ ನಮ್ಮ ಪಕ್ಷ ಭಾಗವಹಿಸಿತು” ಎಂದರು.
ಸಂಸದೀಯ ವ್ಯವಸ್ಥೆಯಲ್ಲಿ ಈ ರೀತಿಯಲ್ಲಿ ಲೋಕಸಭೆಯ ಅಧ್ಯಕ್ಷರು ವಿಧಾನ ಮಂಡಲ ಜಂಟಿ ಕಲಾಪವನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಇಲ್ಲ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಈ ಬಗ್ಗೆ ಸಾಂವಿಧಾನಿಕ ತಜ್ಞರೇ ಉತ್ತರ ನೀಡಲಿ ಎಂದರು.
ಇನ್ನು, ಕಾಂಗ್ರೆಸ್ ಪಕ್ಷದ ಸದಸ್ಯರು ಜಂಟಿ ಕಲಾಪವನ್ನು ಬಹಿಷ್ಕರಿಸಿದ್ದರಲ್ಲಾ ಎಂಬ ಪ್ರಶ್ನೆಗೆ, ಅದು ಆ ಪಕ್ಷಕ್ಕೆ ಬಿಟ್ಟ ವಿಚಾರ. ನಮ್ಮ ಪಕ್ಷದ ನಿಲುವನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಉತ್ತರಿಸಿದರು. ಸದನದ ಕಲಾಪದ ಬಗ್ಗೆ ಹೊರಗೆ ಮಾತನಾಡುವುದು ಸರಿಯಲ್ಲ. ಕಲಾಪ ಹೇಗೆ ನಡೆಯುತ್ತಿದೆ ಎಂಬುದು ರಾಜ್ಯ ಜನತೆಗೆ ಚೆನ್ನಾಗಿ ಗೊತ್ತಾಗುತ್ತಿದೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಆದರೆ, ಕಲಾಪದ ಬಗ್ಗೆ ಬಹಿರಂಗವಾಗಿ ಮಾತನಾಡಿ ಸದನಕ್ಕೆ ಅಗೌರವ ತೋರುವ ಅಥವಾ ಸದನ ಪಾವಿತ್ರ್ಯತೆಗೆ ಧಕ್ಕೆ ತರಬಾರದು ಎನ್ನುವುದು ನನ್ನ ನಿಲುವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

More News

You cannot copy content of this page