ಬೆಂಗಳೂರು : ಕೇಂದ್ರ ಸರಕಾರದ ನಿರಂತರ ಇಂಧನ ಬೆಲೆ ಹಾಗೂ ತತ್ಪರಿಣಾಮ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಸತತ ಮೂರನೇ ಬಾರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಮುಖಂಡರು ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗ್ ಜಾಥಾ ನಡೆಸಿ, ಸರ್ಕಾರದಗಮನ ಸೆಳೆದರು. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಘೋಷಣೆಗಳನ್ನು ಕೂಗಿದರು. ತಕ್ಷಣವೇ ಬೆಲೆ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇವತ್ತು ಟಾಂಗ್ ಗಾಡಿಯಲ್ಲಿ ಬಂದು ಪ್ರತಿಭಟನೆ ಮಾಡಿದ್ದೇವೆ, ಮೋದಿ ಸರ್ಕಾರ ಅಧಿಕಾರಕ್ಕೆ ಬಂದ್ಮೇಲೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಧ್ಯಮ ವರ್ಗದ ಜನರ ಬದಕು ದುಸ್ತರವಾಗಿದೆ ಎಂದು ಆರೋಪಿಸಿದರು.

ಅಚ್ಚೇ ದಿನ್ ಆಯೇಗಾ ಅಂತ ಹೇಳಿದ್ರು, ಬದಲಾಗಿ ಮನೆಗಳಲ್ಲಿ ಹೆಂಡತಿಯವರ ತಾಳಿ ಗಿರವಿ ಇಡುವ ಪರಿಸ್ಥಿತಿ ಬಂದಿದೆ, ಬೆಲೆ ಏರಿಕೆಯಿಂದ ಸಾಕಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಬಿಜೆಪಿಯವರು ಕಾರ್ಪೊರೇಟ್ ಕಂಪನಿ ಪರ ಇದ್ದಾರೆ, ಕಾಂಗ್ರೆಸ್ ಬಡವರ ಪರ ಇದೆ ಎಂದು ಸ್ಪಷ್ಟನೆ ನೀಡಿದರು. ರೈತರು, ಸಾಮನ್ಯ ವರ್ಗದವರ ಧ್ವನಿಯಾಗಿ ಪ್ರತಿಭಟನೆ ಮಾಡ್ತಿದ್ದೇವೆ, ಈ ಸರ್ಕಾರ ಕಿತ್ತು ಹಾಕುವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಸ್ಪಷ್ಟನೆ ನೀಡಿದರು.
ಸುಳ್ಳಿನ ಫ್ಯಾಕ್ಟರಿ ಬಿಜೆಪಿ
ಬಿಜೆಪಿಯವರು ಸುಳ್ಳಿನ ಫ್ಯಾಕ್ಟರಿ ಇದ್ದ ಹಾಗೇ, ಸಾಮಾನ್ಯ ಜನರು ಮತ್ತು ರೈತರನ್ನ ದಾರಿ ತಪ್ಪಿಸುವ ಕೆಲಸ ಬಿಜೆಪಿ ಮಾಡುತ್ತಿದೆ, ಬಿಜೆಪಿಯವರು ಲಜ್ಜಗೆಟ್ಟವರು, ದಪ್ಪ ಚರ್ಮದವರು ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಎಲ್ಲಾ ಬೆಲೆಗಳು ಗಗನಕ್ಕೆ ಏರಿದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಪಿಕ್ ಪಾಕೇಟ್ ಮಾಡುತ್ತಿವೆ, ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿನೂ ಇಲ್ಲ, ಜನರ ಧ್ವನಿಯಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಮುಂದಿನ ಅಕ್ಟೋಬರ್ ನಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತೇವೆ, ಜನರೇ ಈ ಸರ್ಕಾರ ಕಿತ್ತುಗೆಯಬೇಕು,
ರೈತರಿಗೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದರು.
ಟಾಂಗಾ ಚಲಾಯಿಸಿದ ಸಿದ್ದರಾಮಯ್ಯ
ಈ ಬಾರಿಯ ಪ್ರತಿಭಟನೆ ಸಂದರ್ಭದಲ್ಲಿ ಟಾಂಗಾವನ್ನು ಸಿದ್ದರಾಮಯ್ಯ ಚಲಿಸಿದರು, ಪಕ್ಕದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುಳಿತಿದ್ದರು. ಈ ಹಿಂದೆ ಎತ್ತಿನಗಾಡಿ ಜಾಥಾದಲ್ಲೂ ಸಿದ್ದರಾಮಯ್ಯ ಗಾಡಿ ಓಡಿಸಿದ್ದರು. ಡಿಕೆಶಿವಕುಮಾರ್ ಪಕ್ಕದಲ್ಲಿ ನಿಂತಿದ್ದರು.
ನಾವು ಪ್ರತಿಭಟನೆ ಮಾಡುತ್ತಲೇ ಇದ್ದೇವೆ, ಆದರೆ ಸರ್ಕಾರ ಗಮನಹರಿಸುತ್ತಿಲ್ಲ, ಇಂದು ಟಾಂಗಾ ಪ್ರತಿಭಟನೆ ಮಾಡ್ತಿದ್ದೇವೆ, ತಮಿಳುನಾಡಿನಲ್ಲಿ ಸೆಸ್ ಇಳಿಸಿದ್ದಾರೆ,ಇಲ್ಲೂ ಕೂಡ ಸರ್ಕಾರ ಆಯಿಲ್ ಸೆಸ್ ಇಳಿಸಬೇಕು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಆಗ್ರಹಿಸಿದರು.
ಪೆಟ್ರೋಲ್, ಡೀಸೆಲ್,ಗ್ಯಾಸ್ ಬೆಲೆ ಏರಿಕೆಯಾಗಿದೆ, ಆದರೂ ದಪ್ಪ ಚರ್ಮದ ಸರ್ಕಾರಕ್ಕೆ ಗೊತ್ತಾಗ್ತಿಲ್ಲ, ಕೂಡಲೇ ದರ ಏರಿಕೆ ಕಡಿತಗೊಳಿಸಬೇಕು, ಇಲ್ಲವಾದರೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ
ವಿಧಾನಸೌಧ ಕೆಂಗಲ್ ಗೇಟ್ ಬಳಿ ಮತ್ತೆ ಮಾತನಾಡಿದ ಸಿದ್ದರಾಮಯ್ಯ ಸಿಎಂ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ದಾರೆ. ಇವರು ಬಂದು ಕೂತು ಬಿಟ್ಟಿದ್ದಾರೆ, ಯಡಿಯೂರಪ್ಪ ಪಾಪ ಆಪರೇಷನ್ ಕಮಲ ಮಾಡಿ, ಎಂಎಲ್ ಎಗಳಿಗೆ ದುಡ್ಡು ಕೊಟ್ಟು ಸರ್ಕಾರ ಮಾಡಿದ್ರು, ಅವರನ್ನ ಕಿತ್ತೆ ಎಸೆದು ಬಸವರಾಜ ಬೊಮ್ಮಾಯಿಯನ್ನ ಕೂರಿಸಿಬಿಟ್ಟಿದ್ದಾರೆ.
ಕಷ್ಟಪಟ್ಟಿದ್ರೆ ಗೊತ್ತಾಗೋದು, ಹೋರಾಟ ಮಾಡಿದ್ರೆ ಗೊತ್ತಾಗೋದು, ಹೋರಾಟ ಇಲ್ಲ.. ಏನಿಲ್ಲ ಎಂದು ಸಿದ್ದರಾಮಯ್ಯ, ಮುಖ್ಯಮಂತ್ರಿ ಅವರಿಗೆ ಟಾಂಗ್ ಕೊಟ್ಟಿರು.