ಸಿಲ್ಕ್ ಸ್ಮಿತಾ ನಮ್ಮನ್ನಗಲಿ ಇಪ್ಪತ್ತೈದು ವರ್ಷಗಳು…

(ವೈ ಜಿ ಅಶೋಕ್ ಕುಮಾರ್, ಹಿರಿಯ ಪತ್ರಕರ್ತರು)—

ಅವರು ಬದುಕಿದ್ದು ಮೂವತ್ತೈದು ವರ್ಷಗಳಷ್ಟೇ, ಅಷ್ಟರಲ್ಲಿ ನಮ್ಮ ಮನಸು ಚಿತ್ತವನ್ನು ಕೆಣಕಿ ಕದಲಿಸುವ ಸೆಕ್ಸ್ ಬಾಂಬ್ ಎಂದು ಸಿನಿಮಾ ಮಂದಿಯಿಂದ ನಾಮಾಂಕಿತಗೊಂಡು ಜೀವಂತ ದಂತಕಥೆಯಾಗಿದ್ದವರು ಸಿಲ್ಕ್ ಸ್ಮಿತಾ.

ಸಿಲ್ಕ್ ಸ್ಮಿತಾ ಅಲಿಯಾಸ್ ವಿಜಯಲಕ್ಷ್ಮೀ ನಮ್ಮ ಚಿತ್ರ ರಸಿಕರನ್ನು ಅಗಲಿ ಇಪ್ಪತ್ತೈದು ವರ್ಷ ಕಳೆದರೂ ಇನ್ನೂ ಆಕೆಯ ನೋಟ, ಮಾದಕತೆ ನಮ್ಮನ್ನು ಅಗಲಿದಂತಿಲ್ಲ.

ಸಣ್ಣ ವಯಸ್ಸಿನಲ್ಲಿ ಮದುವೆಯ ಜಾಲಕ್ಕೆ ಸಿಲುಕಿ ನೋವುಂಡ ವಿಜಯಲಕ್ಷ್ಮೀ ಅಷ್ಟೇ ಬೇಗ ಪತಿಯನ್ನ ತೊರೆದು ಜೀವಿಸಬಹುದು ಎಂಬುದನ್ನು ಸಾಧಿಸಿ ತೋರಿಸಿ ಪಿಚ್ಚರ್ ನಿರ್ಮಾಪಕರ ತಿಜೋರಿ ತುಂಬುವ ಲಕ್ಷ್ಮೀಯಾಗಿ ಸಿಲ್ಕ್ ಇನ್ ಸ್ಕ್ರೀನ್ ಆದವರು.

ನಾಯಕ ನಾಯಕಿಯರಿಗೆ ಸರಿಸಮನಾಗಿ ನಟಿಸಿದ್ದಲ್ಲದೆ, ಕ್ಲಬ್ ಡ್ಯಾನ್ಸ್ ನಲ್ಲಿ ಮಿರಿ ಮಿರಿ ಮಿಂಚಿದ ದಕ್ಷಿಣ ಭಾರತದ ಮೊದಲಿಗರು. ಕೆಲವು ಅತ್ಯುತ್ತಮ ಪಾತ್ರಗಳು ಆಕೆಯ ಪಾಲಿಗೆ ಸೃಷ್ಟಿಯಾಯಿತು ಇನ್ನೂ ಕೆಲವು ಹುಡುಕಿ ಬಂದವು.

ತನ್ನ ಲೀಲಾಜಾಲ ಅಭಿನಯ, ಕಣ್ಣೋಟ, ನಯ ನಾಜೂಕುತನ ಸಿಲ್ಕ್ ಅನ್ನು ಬಹು ಎತ್ತರದ ನಟಿಯನ್ನಾಗಿ ಭಾರತೀಯ ಚಿತ್ರರಂಗ ಗುರುತಿಸಿತು. ಪಡ್ಡೆ ಹುಡುಗರು ಚಿತ್ರ ಮಂದಿರದಲ್ಲೇ ಉಳಿದರು. ಆಕೆ ತೆರೆಯ ಮೇಲೆ ಬರುವಷ್ಟೂ ಹೊತ್ತು ನೋಡುತ್ತದ್ದ ಹೈಕಳು ಆಮೇಲೆ ಲೋಚ ಗುಟ್ಟುತ್ತಾ ಆಚೆ ನಡೆಯುತ್ತಿದ್ದರು.

ಆಂಧ್ರ ಪ್ರದೇಶದ ದಿಂಡಲೂರು ಮಂಡಲದಲ್ಲಿ ಜನಿಸಿದ ಈ ತಾರೆ ಕೇವಲ ನಾಲ್ಕೈದು ತರಗತಿಯಷ್ಟೇ ಓದಲು ಸಾಧ್ಯವಾಯಿತು. ಬಡತನದ ಬೇಗೆಯಿಂದ ವಿಜಯಲಕ್ಷ್ಮೀಗೆ ಬಾಲ್ಯವಿವಾಹವಾಗಿ ಗಂಡನ ಮನೆಯ ಹಿಂಸೆ ತಡೆಯಲಾರದೇ ಊರು ಬಿಟ್ಟು ಓಡಿದವರು, ಬಂದು ನಿಂತಿದ್ದು ಮತ್ತೊಂದು ಜಗತ್ತಿನಲ್ಲಿ. ಪಿಚ್ಚರ್ ಹಿರೋಯಿನ್ ಗಳಿಗೆ ಟಚಪ್ ಮಾಡುವ ಹುಡುಗಿಯಾಗಿ ಇತರರನ್ನು ನೋಡುತ್ತಲೇ ಅಭಿನಯ ಕಲಿತವಳಿಗೆ ಮೊದಲ ಸಿನಿಮಾ ಮಾಡಲು ಮಲೆಯಾಳಂ ಚಿತ್ರರಂಗದ ನಿರ್ದೇಶಕ ಆಂಟನಿ ಈಸ್ಟಮನ್ ಕರೆನೀಡಿದರು. ಅಲ್ಲದೆ ಸ್ಮಿತಾ ಎಂದು ನಾಮಕರಣ ಮಾಡಿ ” ಇನಿಯ ತೇದಿ” ಎಂಬ ಚಿತ್ರ ನಿರ್ದೇಶಿಸಿದರು.

ಆತನ ಪತ್ನಿ ಈಕೆಯ ಕಥೆ ಕೇಳಿ ಒಬ್ಬ ಅತ್ಯುತ್ತಮ ಡ್ಯಾನ್ಸರ್ ಆಗಿ ರೂಪಿಸಿದರು. 1979 ರಲ್ಲಿ ತೆರೆಕಂಡ ವಂಡಿ ಚಕ್ರ ಚಿತ್ರದಲ್ಲಿ ಮುಖ್ಯ ನಾಯಕಿಯಾಗಿದ್ದರು, ಆ ಚಿತ್ರ ಬಿಗ್ ಹಿಟ್ ಆಗಿತ್ತು.  ಆಮೇಲೆ ಆಕೆ ತಿರುಗಿ ನೋಡುವಂತೆಯೇ ಇರಲಿಲ್ಲ. ಕಮಲ್, ರಜನೀಕಾಂತ್ ಮತ್ತು ಮಣಿರತ್ನರಂತಹ ನಿರ್ದೇಶಕರ ಚಿತ್ರಗಳಲ್ಲಿ ಸಿಲ್ಕ್ ಮಿಂಚಿದರು.

ಆ ಸಾಲಿನಲ್ಲಿ ಬಾಲು ಮಹೇಂದ್ರರ ” ಮೂನ್ರಾ ಪಿರೈ ” ಸೂಪರ್ ಹಿಟ್ ಆಯಿತು. ಕನ್ನಡದ ಅಆಇಈ ಕಲಿಸಿದ ರವಿಚಂದ್ರನ್ ಅವರ ಹಳ್ಳಿ ಮೇಸ್ಟ್ರು, ತಮಿಳಿನಲ್ಲಿ ಭಾಗ್ಯರಾಜ್ ಹಾಗೂ ಊರ್ವಶಿ ಅಭಿನಯದ ಮುಂದಾನೈ ಮುಡಿಚ್ಚು, ತಮಿಳು ನಾಡಿನ ಮನೆ ಮನೆ ಮಾತಾಗಿತ್ತು.

ಸಿನಿಮಾದ ಪಡಿಯಚ್ಚಾದರೂ ಕನ್ನಡದಲ್ಲಿ ಹಳ್ಳಿ ಮೇಸ್ಟ್ರು ಮತ್ತು ಮೇಡಂ ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿದರು. ನೇರವಂತಿಕೆ ಆಕೆಯ ವೀಕ್ ನೆಸ್ ಆಗಿಹೋಯಿತು. ನಿಗದಿತ ಸಮಯಕ್ಕೆ  ಶೂಟಿಂಗ್ ಹಾಜರಾಗಿ ತನ್ನ ಪಾಲಿನ ಕೆಲಸ ನಿರ್ವಹಣೆ ಮಾಡುತ್ತಿದ್ದರೂ ಬಿಗ್ ಹೀರೋ, ಹಿರೋಯಿನ್ ಗಳು ಸಮಯ ಪಾಲನೆ ಮಾಡದ ಕುರಿತು ಹಲವು ಸಲ ಆಕೆಯ ಆಕ್ಷೇಪಣೆಗೆ ಸಕಾರಣಗಳಿದ್ದವು.

ಜೀವನದಲ್ಲಿ ತುಂಬಾ ನೊಂದು ಬೆಂದು ಹೋಗಿದ್ದ ಸಿಲ್ಕ್ ಸ್ಮಿತಾ ನೇರ ನಡೆ ನುಡಿಯಿದ್ದರೂ  ಮಗುವಿನಂತೆ ಮನಸು ಆಕೆಯನ್ನು ಹಲವರು ಉಪಯೋಗಿಸಿಕೊಂಡರೆ ಮತ್ತೆ ಕೆಲವರು ದುರುಪಯೋಗಿಸಿಕೊಂಡರು.

ಕೊನೆಗವರು ಕುಡಿತದ ನಿಶೆಯಲ್ಲಿ ಬದುಕತೊಡಗಿದರು. ತಾನು ನಂಬಿದವರಿಂದ ಮೋಸ ಹೋಗಿದ್ದಲ್ಲದೆ ನಿಂದನೆಗೂ ಒಳಗಾಗಿ ನೊಂದು ಹೋದರು. ಆ ಒಂದು ದಿನ ಲೆಕ್ಕಕ್ಕೆ ಸಿಕ್ಕದಷ್ಟು ಕುಡಿದು ನೇಣಿಗೆ ಶರಣಾದಳೆಂದು ಆಕೆಯ ಪೋಸ್ಟ್ ಮಾರ್ಟಂ ರಿಪೋರ್ಟ್ ಸಾರಿತು.

ಸಿಲ್ಕ್ ಸಾಯುವ ಮೊದಲು ತನ್ನ ಆತ್ಮೀಯ ಗೆಳತಿ ಮತ್ತೊಬ್ಬ ಡ್ಯಾನ್ಸರ್ ಅನುರಾಧಳಿಗೆ ಫೋನ್  ಮಾಡಿ ಗದ್ಗದಿತಳಾಗುತ್ತಾಳೆ.  ಅನುರಾಧಾ ತನ್ನ ಮಗಳನ್ನು ಶಾಲೆಗೆ ಬಿಟ್ಟು ಗೆಳತಿ ಸ್ಮಿತಾಳನ್ನು ಬದುಕಿಸಿಕೊಳ್ಳಲು ಓಡೋಡಿ ಬಂದರು. ಬಿಕ್ಕಿ ಬಿಕ್ಕಿ ಅಳುತ್ತಾ ನೇತಾಡುತ್ತಿದ್ದ ಗೆಳತಿಯ ಪಾದಕ್ಕೆ ಮುತ್ತಿಕ್ಕಿದಳು. ಸೆಕ್ಸ್ ಬಾಂಬ್ ಎಂದು ಮಜಾ ತೆಗೆದುಕೊಂಡ ಸಿನಿಮಾ ರಂಗದ ಮಾಂಸದ ಮುದ್ದೆಯೊಂದು ತನ್ನ ಕೊನೆಯ ಉಸಿರೆಳೆದಿತ್ತು.

More News

You cannot copy content of this page