ಬೆಂಗಳೂರು : ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆಸಿದ ಜಾತಿ ಗಣತಿ ವರದಿ ಈಗ ಜೆಡಿಎಸ್ ಮತ್ತು ಕಾಂಗ್ರೆಸ್ಸಿ ಮುಖಂಡರುಗಳ ಕೆಸರೆರಚಾಟಕ್ಕೆ ನಾಂದಿ ಹಾಡಿದೆ. ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದಾಗ ಸುಮ್ಮನಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈಗ ಜೆಡಿಎಸ್ ವಿರುದ್ಧ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರಲ್ಲದೆ, ಅವರ ವಿರುದ್ಧ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಳ್ಳನ್ನು ಪದೇ ಪದೇ ಹೇಳುತ್ತಾ ಜನರನ್ನು ದಾರಿತಪ್ಪಿಸುವ ಸಿದ್ದಕಲೆ ಅವರಿಗೆ ಚನ್ನಾಗಿ ಸಿದ್ದಿಸಿದೆ ಎಂಬುದನ್ನು ನಾನು ಬಲ್ಲೆ. ನಿತ್ಯವೂ ಸುಳ್ಳಿನ ಜಪ ಮಾಡುವುದೇ ಅವರಿಗೆ ನಿತ್ಯ ಕಾಯಕ. ಇದು ಸತ್ಯಕ್ಕೆ ಮತ್ತು ರಾಜ್ಯಕ್ಕೆ ಎಸಗುವ ಅಪಚಾರ ಹಾಗೂ ಶಾಂತ ಸಮಾಜವನ್ನು ಒಡೆಯುವ ಹುನ್ನಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಹಾಗೆಯೇ, ನಾನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಕಾಂತರಾಜು ಅವರ ವರದಿಯ ಬಗ್ಗೆ ಅವರು ಪ್ರಸ್ತಾವನ್ನೇ ಮಾಡಲಿಲ್ಲ, ಮತ್ತು ಚರ್ಚೆ ಮಾಡುವ ಧೈರ್ಯವನ್ನೇಕೆ ತೋರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಆ ವರದಿಯಲ್ಲಿ ಸಹಿಯೇ ಇಲ್ಲ ಎಂದು ಸ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು, ಈಗ ಪ್ರತಿಪಕ್ಷ ನಾಯಕರೂ ಆಗಿರುವ ರಾಜಕೀಯ ಪಂಡಿತರಿಗೆ ಹೇಳಿಕೆ ನೀಡುವ ಮುನ್ನ ಆ ಕನಿಷ್ಠ ಸಾಮಾನ್ಯ ಪ್ರಶ್ನೆ ಇರಬೇಕಾಗಿತ್ತು ಎಂದು ಆರೋಪಿಸಿದ್ದಾರೆ.

ಜಾತಿ ಗಣತಿ ವರದಿ ಬಗ್ಗೆ ಇಷ್ಟೆಲ್ಲ ಪ್ರೀತಿ ಕಾಳಜಿ ತೋರುವ ಈ ಮಹಾನುಭಾವರು, ನಿನ್ನೆಯವರೆಗೂ ನಡೆದ ವಿಧಾನಮಂಡಲ ಕಲಾಪದಲ್ಲಿ ಏಕೆ ಪ್ರಸ್ತಾಪ ಮಾಡಲಿಲ್ಲ, ತಮ್ಮ ಪಕ್ಷದಲ್ಲೇ ತಮಗೆ ಬೀಳುತ್ತಿರುವ ಒಳಏಟುಗಳ ಹೊಡೆತ ತಾಳಲಾಗದೇ, ಅದೆಲ್ಲವನ್ನೂ ಮುಚ್ಚಿಟ್ಟುಕೊಳ್ಳಲು ಬಹಿರಂಗವಾಗಿ ಬೊಬ್ಬೆ ಹೊಡೆಯುವುದು ಹತಾಶೆ ಮತ್ತು ರಾಜಕೀಯ ಅವಕಾಶವಾದಿತನವಷ್ಟೇ ಎಂದಿದ್ದಾರೆ.

ಇಂತಹ ವರದಿಯನ್ನು ಸಲ್ಲಿಸಬೇಕಾಗಿದ್ದು ಮುಖ್ಯಮಂತ್ರಿಗಳಿಗೆ ವಿನ ಸಚಿವರಿಗಲ್ಲ. ಸುದೀರ್ಘ ರಾಜಕೀಯ ಅನುಭವ, ಸಂಸದೀಯ ಚರಿತ್ರೆ ಇದ್ದರಷ್ಟೇಸಾಲದು, ಕೊಂಚ ಸಾಮಾನ್ಯ ಜ್ಞಾನವೂ ಇರಲಿ, ಪದೇ ಪದೇ ಸಿದ್ದಹಸ್ತಿಕೆ ತೋರುವ ಪ್ರಯತ್ನ ಬೇಡ ಎಂದಿದ್ದಾರೆ.
ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಮುನ್ನ ತಮ್ಮ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸಲಿ, ಸಮಾಜದ ಶಾಂತಿಗೆ ಕೊಳ್ಳಿ ಇಡುವ ದುಸ್ಸಾಹಸಕ್ಕೆ ಕೈಹಾಕಿದರೆ ಜನರೇ ಉತ್ತರ ಕೊಡುತ್ತಾರೆ,ಕಂಡವರ ಮಕ್ಕಳನ್ನುಬಾವಿಗೆ ತಳ್ಳಿ ವಿಕೃತ ಆನಂದ ಅನುಭವಿಸುವುದು ಹೇಯ, ಮುಗ್ಧ ಜನರಲ್ಲಿ ಜಾತಿಯ ವಿಷಬೀಜ ಬಿತ್ತುವುದು ರಾಜಕೀಯ ನಿಕೃಷ್ಟತೆಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




