ಬೆಳಗಾವಿ : ಇತ್ತೀಚೆಗೆ ನಡೆದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದ ಬಿಜೆಪಿ ೩೫ ಜನ ಪಾಲಿಕೆ ಸದಸ್ಯರಿಗೆ ಇಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಿದರು.
ರಾಷ್ಟ್ರೀಯತೆ ನಮ್ಮ ಪಕ್ಷದ ಮೊದಲ ಪ್ರಾಶಸ್ತ್ಯ ಇರುವುದರಿಂದ ಪ್ರತಿಯೊಬ್ಬ ಕಾರ್ಯಕರ್ತರು ದೇಶ ಸೇವೆ ಮಾಡುತ್ತಿದ್ದಾರೆ. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ರಾಷ್ಟ್ರೀಯ ಸೇವಕರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಎಲ್ಲಾ ಸಮಾಜದ ಪ್ರೀತಿ ವಿಶ್ವಾಸ ಗಳಿಸಿ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.

ಇನ್ನು ಅನೇಕ ಬೇರೆ ಪಕ್ಷಗಳು ಸೇವೆ ಹೆಸರಿನಲ್ಲಿ ಅವರ ಸ್ವಾರ್ಥ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಅವರು ಸಂಪೂರ್ಣವಾಗಿ ಜನಮನ್ನಣೆ ಗಳಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುತ್ತಿದೆ. ಇದನ್ನು ಸಂಪೂರ್ಣ ಅನುಷ್ಠಾನಕ್ಕೆ ತರಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ತಿಳಿಸಿದರು.
ನಮ್ಮ ಮಕ್ಕಳಿಗೆ ಈ ಭೂಮಿಯ ಇತಿಹಾಸ, ಭವ್ಯ ಪರಂಪರೆ ನೀಡುವ ಕೆಲಸವಾಗಬೇಕು. ಭಾರತೀಯ ಮಕ್ಕಳ ಭವಿಷ್ಯಗೋಸ್ಕರ ಈ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗುತ್ತಿದೆ ಎಂದು ಹೇಳಿದರು. ನಮ್ಮಲ್ಲಿನ ಪೂಜಾಮಂದಿರಗಳ ರಕ್ಷಣೆಗೆ ಯಾರ ಸಲಹೆಗಳಿದ್ದರೂ ಅವನ್ನು ಪಡೆದುಕೊಳ್ಳಲು ಸರ್ಕಾರ ಸಿದ್ದವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಉಮೇಶ ಕತ್ತಿ, ಗೋವಿಂದ ಕಾರಜೋಳ, ಬೈರತಿ ಬಸವರಾಜ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ ಕಟಿಲ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಕೆ ಎಲ್ ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕರಾದ ಅಭಯ್ ಪಾಟೀಲ್, ಅನಿಲ್ ಬೆನಕೆ, ಆನಂದ್ ಮಾಮನಿ, ಮಹಾಂತೇಶ ಕವಟಗಿಮಠ , ದುರ್ಯೋಧನ ಐಹೊಳೆ ಸೇರಿದಂತೆ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.