ಬೆಂಗಳೂರು : ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಸಂಬಂಧ ಈಗಾಗಲೇ ಮನೆಗಳನ್ನು ಫಲಾನುಭವಿಗಳಿಗೆ ಹಂಚಬೇಕಾಗಿತ್ತು, ಆದ್ರೆ ತಾಂತ್ರಿಕ ಸಮಸ್ಯೆಯಿಂದ ಇದಾಗಲಿಲ್ಲ, ಶೀಘ್ರದಲ್ಲೇ ಈ ಮನೆಗಳನ್ನು ಹಂಚಲಾಗುವುದು ಎಂದು ವಸತಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ “ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆ”ಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ವಸತಿಗೆ ಸಂಬಂಧಸಿದಂತೆ ಚರ್ಚೆ ಮಾಡಲಾಗಿದೆ. ಬೆಂಗಳೂರು ಶಾಸಕರ ಜೊತೆ ಚರ್ಚಿಸಿ, ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ತಿಳಿಸಿದ್ದಾರೆ.

೪೬೪೪೯ ಮನೆಗಳು ಈಗಾಗಲೇ ನಿರ್ಮಾಣವಾಗಿವೆ, ೧೦ ಸಾವಿರ ಮನೆಗಳನ್ನ ಹಂಚಬೇಕಿತ್ತು, ಕೆಲವು ಕಾರಣಗಳಿಂದ ಸಾಧ್ಯವಾಗಿರಲಿಲ್ಲ, ಪರಿಶಿಷ್ಟರಿಗೆ ೨ ಲಕ್ಷ ಮನೆಗಳ ನಿರ್ಮಾಣ ಮಾಡಿ ನೀಡಲಾಗುವುದು ಎಂದು ತಿಳಿಸಿದ ಸೋಮಣ್ಣ, ಕೇಂದ್ರ ಸರ್ಕಾರ ಈ ಯೋಜನೆಗೆ ೫೦೦ ಕೋಟಿ ಹಣ ನೀಡಿದೆ ಎಂದು ತಿಳಿಸಿದರು.
ಒಂದು ಮನೆಗೆ ೯ ಲಕ್ಷ ರೂ. ಖರ್ಚಾಗಿದೆ, ಪರಿಶಿಷ್ಟ ಜಾತಿ, ಪಂಗಡಕ್ಕೆ ೫ ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ, ಇತರರಿಗೆ ೫.೫ ಲಕ್ಷ ರೂಪಾಯಿ ಹಣ ನಿಗದಿ ಮಾಡಿದ್ದೇವೆ ಎಂದು ವಿವರಿಸಿದ ಅವರು, ಬಡವರಿಗಾಗಿ ಈ ಯೋಜನೆ ತಂದಿದ್ದೇವೆ, ೪೬ ಸಾವಿರ ಮನೆಗಳನ್ನು ಏಳೆಂಟು ತಿಂಗಳಲ್ಲಿ ಹಂಚಿಕೆ ಮಾಡಲಿದ್ದೇವೆ ಎಂದರು.
ಈ ಮನೆಗಳನ್ನು ಸ್ವಾತಂತ್ರ್ಯ ದಿನಾಚರಣೆಯಂದೇ ಹಂಚಬೇಕಿತ್ತು, ಎಂಟು ಕಡೆಗಳಲ್ಲಿ ಈ ವಸತಿ ಯೋಜನೆ ನಿರ್ಮಿಸಲಾಗಿದೆ, ಸ್ಥಳೀಯ ಬಡವರಿಗೆ ಹೆಚ್ಚಿನ ಒತ್ತು ನೀಡಲಾಗಿದೆ, ಕೈಗೆಟಕುವ ದರದಲ್ಲಿ ಬಡವರಿಗೆ ಹಂಚಿಕೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.




