ಕಾಂಗ್ರೆಸ್ ಗುಲಾಮಗಿರಿ ಪಕ್ಷ ಅಲ್ಲ, ಕಾರ್ಪೋರೇಟ್ ಗಳ ಗುಲಾಮಗಿರಿ ಬಿಜೆಪಿ ಪರಿವಾರ : MLC ಪ್ರಕಾಶ್ ರಾಥೋಡ್

ಬೆಂಗಳೂರು : ಕಾಂಗ್ರೆಸ್ ಗುಲಾಮಗಿರಿ ಪಕ್ಷ ಎನ್ನುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಸರಣಿ ಟ್ವೀಟ್ ಗಳ ಮೂಲಕ ಖಡಕ್ ಉತ್ತರ ಕೊಟ್ಟಿದ್ದಾರಲ್ಲದೆ, ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ, ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ಇತಿಹಾಸ ಇರುವ ಬಿಜೆಪಿ ಪರಿವಾರ ಬಳಿಕ ನಾಜಿಗಳ ಗುಲಾಮಗಿರಿ ಮಾಡಿ ಈಗ ವರ್ತಮಾನದಲ್ಲೂ ಕಾರ್ಪೋರೇಟ್ ಶಾಹಿಯ ಗುಲಾಮಗಿರಿ ಮಾಡುತ್ತಿದೆ ಎಂದು ಸರಣಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದಾರೆ.


ಆತ್ಮವಂಚನೆಗೂ ಒಂದು ಮಿತಿ ಇರಬೇಕು ಮುಖ್ಯಮಂತ್ರಿಗಳೇ… ಸಂಘ ಪರಿವಾರ ವಿರೋಧಿ ಜನತಾ ಪರಿವಾರದ ಮೂಲಕ ರಾಜಕಾರಣಕ್ಕೆ ಬಂದ ನೀವು ದೇಶಭಕ್ತಿಯ ಚರಿತ್ರೆ, ಇತಿಹಾಸವೇ ಇಲ್ಲದ ಬಿಜೆಪಿಯನ್ನು ದೇಶಭಕ್ತಿಯ ಪಕ್ಷ ಎಂದು ಕರೆಯುತ್ತಿರುವುದು ಆತ್ಮವಂಚನೆ ಅಲ್ಲವೇ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದೇ, ಕ್ವಿಟ್ ಚಳವಳಿಯಲ್ಲಿ ಭಾವಹಿಸಿದ ಸ್ವಾತಂತ್ರ್ಯ ವೀರರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟ ಬಿಜೆಪಿ ನಾಯಕರ ಚರಿತ್ರೆಯನ್ನು ನೀವು ಮುಖ್ಯಮಂತ್ರಿ ಆದ ಎರಡು ತಿಂಗಳಲ್ಲೇ ಮರೆತುಬಿಟ್ಟಿರಾ?


ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಹುಟ್ಟಿಕೊಂಡ, ಸ್ವಾತಂತ್ರ್ಯ ಚಳವಳಿ ಮೂಲಕವೇ ದೇಶದ ಜನಮಾನಸದಲ್ಲಿ ಬೇರು ಬಿಟ್ಟ ಕಾಂಗ್ರೆಸ್ಸನ್ನು ಗುಲಾಮಗಿರಿ ಪಕ್ಷ ಎಂದು ಕರೆದಿದ್ದೀರಿ. ಬ್ರಿಟಿಷರ ವಿರುದ್ಧ ಹೋರಾಡಿ, ಹುತಾತ್ಮರಾಗಿ, ಜೈಲು ಸೇರಿ, ತಮ್ಮ ಆಸ್ತಿ ಪಾಸ್ತಿಯನ್ನೆಲ್ಲಾ ದೇಶಕ್ಕೆ ಬಿಟ್ಟುಕೊಟ್ಟ ಲಕ್ಷಾಂತರ ಮಂದಿ ಕಾಂಗ್ರೆಸ್ಸಿನವರು. ಈ ಚರಿತ್ರೆ ಬಿಜೆಪಿಗೆ ಇದೆಯೇ ? ಬ್ರಿಟಿಷರ ಗುಲಾಮಗಿರಿ ಮಾಡಿಕೊಂಡಿದ್ದ ಬಿಜೆಪಿಯ ಚರಿತ್ರೆ ನಿಮಗೆ ಮುಖ್ಯಮಂತ್ರಿ ಕುರ್ಚಿ ಸಿಕ್ಕ ತಕ್ಷಣ ಅಳಿಸಿ ಹೋಗುತ್ತದೆಯೇ ?


ಬ್ರಿಟಿಷರ ಬಕೆಟ್ ಆಗಿದ್ದ ಗೋಡ್ಸೆಯಿಂದ ಕೊಲೆಯಾದ ಮಹಾತ್ಮಗಾಂಧಿ, ಅಖಂಡ ಭಾರತಕ್ಕಾಗಿ ಖಲಿಸ್ತಾನ ಉಗ್ರರನ್ನು ಸದೆ ಬಡಿದು ಅವರ ಗುಂಡಿಗೆ ಎದೆಕೊಟ್ಟು ಹುತಾತ್ಮರಾದ ಇಂದಿರಾಗಾಂಧಿ, ಎಲ್ ಟಿ ಟಿ ಇ ಗೆ ಹುತಾತ್ಮರಾದ ರಾಜೀವ್ ಗಾಂಧಿ ಯಾರಿಗಾಗಿ ಹುತಾತ್ಮರಾದರು. ಅಂಬಾನಿ- ಅದಾನಿಯ ಗುಲಾಮಗಿರಿ ಮಾಡಿಕೊಂಡಿರುವ ನಿಮ್ಮ ಪರಿವಾರದ ನಾಯಕರಿಗೆ ಕೇಳಿ ಹೇಳಿ ಮುಖ್ಯಮಂತ್ರಿಗಳೇ ?


ಬಿಜೆಪಿ ಪರಿವಾರದ ಯಾರೂ ಕೂಡ ದೇಶಕ್ಕಾಗಿ ಹುತಾತ್ಮರಾದ ಚರಿತ್ರೆ ಇಲ್ಲ. ಈ ಪಾಪಪ್ರಜ್ಞೆಯಿಂದ ಹೊರಗೆ ಬರಲಾರದ ಆತ್ಮವಂಚನೆ ಮತ್ತು ದೇಶದ್ರೋಹವನ್ನೇ ಆಚರಿಸುತ್ತಿರುವ ಬಿಜೆಪಿ ಪರಿವಾರ ಸ್ವಾತಂತ್ರ್ಯ ಬಂದ ನಂತರವಾದರೂ ದೇಶಭಕ್ತಿ ರೂಢಿಸಿಕೊಂಡ, ದೇಶಭಕ್ತಿ ಆಚರಿಸಿದ ಉದಾಹರಣೆ ಇಲ್ಲ .
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತಿದ್ದರೂ ನಿಮ್ಮ ಸಂಘ ಪರಿವಾರದ ಕಚೇರಿ ಮೇಲೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದೂ ದೇಶದ ತ್ರಿವರ್ಣ ಬಾವುಟ ಹಾರಿಸುವುದಿಲ್ಲ. ಇದಕ್ಕಿಂತ ದೇಶದ್ರೋಹ ಬೇರೆ ಇದೆಯೇ ? ನೀವೇಕೆ ಭಾರತದ ಧ್ವಜ ಹಾರಿಸದೆ ಏಕಿನ್ನೂ ಬ್ರಿಟಿಷರ ಗುಲಾಮಗಿರಿ ಮನಸ್ಥಿಯಿಂದ ಹೊರಗೆ ಬಂದಿಲ್ಲ ಎಂದು ನಿಮ್ಮ ಪರಿವಾರದ ನಾಯಕರನ್ನು ಪ್ರಶ್ನಿಸಿದ್ದೀರಾ ?


ಈ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ ಕಾಂಗ್ರೆಸ್ ಸ್ವಾತಂತ್ರ್ಯ ಸಿಕ್ಕಿದ ಬಳಿಕವೂ ದೇಶ ನಿರ್ಮಾಣದಲ್ಲಿ ತೊಡಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ವಿಶ್ವಮಟ್ಟಕ್ಕೆ ದೇಶವನ್ನು ಎತ್ತರಿಸಿದ್ದು ಕಾಂಗ್ರೆಸ್. ನೂರಾರು ಸಂಶೋಧನಾ ಸಂಸ್ಥೆಗಳು, ವೈದ್ಯ- ಎಂಜಿನಿಯರಿಂಗ್ ವಿವಿಗಳು, ಇಸ್ರೋ ಸೇರಿದಂತೆ ಅಗಣಿತ ಸಂಸ್ಥೆಗಳನ್ನು ಕಟ್ಟಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶವನ್ನು ಕಟ್ಟಿ ನಿಲ್ಲಿಸಿದ್ದು ಈ ಕಾಂಗ್ರೆಸ್ ಪಕ್ಷ ಎನ್ನುವುದು ನಿಮಗೆ ಚೆನ್ನಾಗಿ ಗೊತ್ತು. ಕಾಂಗ್ರೆಸ್ ಕಾಲದಲ್ಲಿ ಕಟ್ಟಿದ ವಿಮಾನ-ರೈಲು ನಿಲ್ದಾಣಗಳು, ಬಂದರುಗಳು, ಟೆಲಿಕಾಂ, ಹೆದ್ದಾರಿಗಳು, ಕೃಷಿ ಮಾರುಕಟ್ಟೆಗಳನ್ನು ಖಾಸಗಿ ಕಾರ್ಪೋರೇಟ್ ಗಳಿಗೆ ಮಾರಾಟ ಮಾಡುವುದೇ ದೇಶಭಕ್ತಿ ಎಂದು ನಿಮಗೆ ಹೇಳಿಕೊಟ್ಟಿದ್ದು ನಿಮ್ಮ ಪರಿವಾರದ ನಾಯಕರೇ ?


ದೇಶಭಕ್ತಿ ಎಂದರೆ ದೇಶಕ್ಕಾಗಿ ದುಡಿಯುವ ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರ ಬದುಕಿಗೆ ಭದ್ರತೆ ಒದಗಿಸುವುದು. ಆದರೆ ಅಂಬಾನಿ, ಅದಾನಿ ಹಾಗೂ ನಿಮ್ಮನಾಲ್ಕೈದು ಮಂದಿ ಕಾರ್ಪೋರೇಟ್ ಸ್ನೇಹಿತರ 10 ಲಕ್ಷ ಕೋಟಿ ಸಾಲ ಮನ್ನಾ ಮಾಡುವುದು ದೇಶಭಕ್ತಿಯೇ ? ಅಂಬಾನಿ ಒಬ್ಬನದ್ದೇ 4.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿ ಬ್ಯಾಂಕುಗಳನ್ನು ದಿವಾಳಿಯ ಅಂಚಿಗೆ ತಂದಿಟ್ಟಿದ್ದು ದೇಶಭಕ್ತಿಯೇ ? ಕೇಳಿ ನಿಮ್ಮ ಸಂಘ ಪರಿವಾರದ ನಾಯಕರನ್ನು.
ಈ ದೇಶದ ಜನ ಮತ್ತು ಕಾಂಗ್ರೆಸ್ ಪಕ್ಷ ಕಟ್ಟಿದ ಹುತ್ತದೊಳಗೆ (ದೇಶದೊಳಗೆ) ಹಾವಿನಂತೆ ಬಂದು ಸೇರಿಕೊಂಡಿರುವ ಬಿಜೆಪಿ ಮತ್ತು ಪರಿವಾರದ ಸಿದ್ಧಾಂತ ಕೂಡ ಈ ದೇಶದ್ದಲ್ಲ. ಜರ್ಮನಿಯ ಹಿಟ್ಲರ್ ನಿಂದ ಆಮದು ಮಾಡಿಕೊಂಡ ಸಿದ್ದಾಂತ ನಿಮ್ಮದು. ನಿಮ್ಮ ಗಣವೇಷಧಾರಿ ಸಮವಸ್ತ್ರ ಕೂಡ ಜರ್ಮನಿಯದ್ದು. ಹೀಗಾಗಿಯೇ ನಿಮ್ಮ ಪರಿವಾರದ ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರುವುದಿಲ್ಲ ಮುಖ್ಯಮಂತ್ರಿಗಳೇ.
ಮೋದಿ ಅವರು ಪ್ರಧಾನಿ ಆಗುವ ಮೊದಲು ಭಾರತದ ಸಾಲ ಇದ್ದದ್ದು 53.11 ಲಕ್ಷ ಕೋಟಿ. ಮೋದಿ ದರ್ಬಾರಿನ 7 ವರ್ಷಗಳಲ್ಲಿ ದೇಶದ ಸಾಲ 135 ಲಕ್ಷ ಕೋಟಿಗೆ ಏರಿಸಿದ್ದೀರಿ. ಈ ಬಗ್ಗೆ ಪರಿವಾರದ ನಾಯಕರಿಗೆ ನಾಚಿಕೆ ಇಲ್ಲವೇ ? ದೇಶದ ಪ್ರತಿಯೊಬ್ಬ ಪ್ರಜೆ ತಾನು ದುಡಿದ 100 ರೂಪಾಯಿಯಲ್ಲಿ 35-45 ರೂಪಾಯಿಯನ್ನು ಪ್ರತ್ಯಕ್ಷ- ಪರೋಕ್ಷ ತೆರಿಗೆ ಕಟ್ಟುತ್ತಿದ್ದಾನೆ. ಪ್ರತಿಯೊಬ್ಬ ಭಾರತೀಯನನ್ನು ಇಂಚಿಂಚಾಗಿ ಸುಲಿಯುತ್ತಾ ರಕ್ತ ಹೀರುತ್ತಿರುವುದು ದೇಶಭಕ್ತಿಯೇ ?
ಇಡೀ ದೇಶ ಕೋವಿಡ್ ಸಂಕಷ್ಟದಲ್ಲಿದ್ದಾಗ ಅಂಬಾನಿ ಮತ್ತು ಅದಾನಿ ಹಾಗೂ ಕಾರ್ಪೋರೇಟ್ ಗ್ಯಾಂಗಿನ ಮೇಲಿನ ತೆರಿಗೆ ಪ್ರಮಾಣವನ್ನು ಸದ್ದಿಲ್ಲದೆ ಶೇ 30 ರಿಂದ ಶೇ 22 ಕ್ಕೆ ಇಳಿಸಿದ್ದೀರಿ. ಆದರೆ ಬಡ ಭಾರತೀಯ ಪ್ರತಿ ಲೀಟರ್ ಪೆಟ್ರೋಲ್-ಡೀಸೆಲ್ ಗೆ 35 ರೂ ತೆರಿಗೆ ಕಟ್ಟುವಂತೆ ಮಾಡಿದ್ದೀರಿ. ಇದನ್ನೇ ನೀವು ದೇಶಭಕ್ತಿ ಎಂದು ಕರೆಯುತ್ತಿರುವುದಾ ?
ಬಿಜೆಪಿ ಮತ್ತು ಪರಿವಾರದ ಚರಿತ್ರೆ, ಇತಿಹಾಸ ಮತ್ತು ವರ್ತಮಾನದಲ್ಲೂ ದೇಶಭಕ್ತಿಯ ಪಸೆಯೇ ಇಲ್ಲ. ಬ್ರಿಟಿಷರ ಏಜೆಂಟರಾಗಿ ದುಡಿದ ಪರಿವಾರ ತನ್ನ ಹುಟ್ಟಿನಿಂದಲೇ ಈ ದೇಶದ ದುಡಿಯುವ ವರ್ಗಗಳ, ದೀನರ-ಹಿಂದುಳಿದವರ- ಮಹಿಳೆಯರ- ರೈತ- ಕಾರ್ಮಿಕರ ಮತ್ತು ಮಧ್ಯಮ ವರ್ಗದ ಶತ್ರು ಆಗಿದೆ. ಹೀಗಾಗಿ ದೇಶಭಕ್ತಿಗೂ ನಿಮಗೂ ಸಂಬಂಧ ಇರುವುದು ಮಾತು ಮತ್ತು ಭಾಷಣದಲ್ಲಿ ಮಾತ್ರ.
ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರಿಗೆ ಹಿಡಿದು ಕೊಟ್ಟು ಬ್ರಿಟಿಷರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಬ್ರಿಟಿಷರ ಗುಲಾಮರಾದಿರಿ. ನಿಮ್ಮ ಪರಿವಾರದ ಸಿದ್ದಾಂತ ಜರ್ಮನಿಯ ನಾಜಿಗಳದ್ದು. ಸೈದ್ಧಾಂತಿಕವಾಗಿಯೂ ನೀವು ನಾಜಿ ಗುಲಾಮರು. ಸ್ವಾತಂತ್ರ್ಯಾ ನಂತರದಲ್ಲಿ ಅಂಬಾನಿ ಮತ್ತು ಅದಾನಿ ಗ್ಯಾಂಗಿನ ಗುಲಾಮಗಿರಿ ಮಾಡುತ್ತಿರುವವರು ನೀವು ಎಂದು ಟ್ವೀಟ್ ಮಾಡಿದ್ದಾರೆ.

More News

You cannot copy content of this page