ಬೆಂಗಳೂರು : ಬಿಜೆಪಿ ಬಿಟ್ಟು ನಾನು ಬೇರೆ ಯಾವ ಪಕ್ಷಕ್ಕೂ ಹೋಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಶಾಸಕ ಸುರೇಶ್ ಗೌಡ ಸ್ಪಷ್ಟಪಡಿಸಿದ್ದಾರೆ. ಇದರಿಂದ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ಅವರಿಗೆ ಬ್ರೇಕ್ ಹಾಕಿದ್ದಾರೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಇಂದು ಸಂಜೆ ಭೇಟಿಯಾದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಎಸ್ ವೈ ಅವರನ್ನು ಭೇಟಿ ಮಾಡಿದ್ದೇನೆ, ಅವರಿಗೆ ಒಂದು ಮಾಹಿತಿ ಕೊಡಬೇಕಿತ್ತು, ಕೊಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜೀನಾಮೆ ಹಿಂಪಡೆಯುವುದರಬಗ್ಗೆ ಚರ್ಚೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಗೌಡ, ಅವ್ರ ಜೊತೆ ನಾನು ಯಾಕೆ ಈ ಬಗ್ಗೆ ಚರ್ಚೆ ಮಾಡಲಿ..? ಎಂದು ಮರುಪ್ರಶ್ನಿಸಿದ ಅವರು, ಅವರಿಗೂ ಇದಕ್ಕೂ ಸಂಬಂಧ ಏನು..? ಎಂದಿದ್ದಾರೆ.
ನಾನು ಈ ಹಿಂದೆ ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದಾಗಲೇ ಬಿಜೆಪಿ ಪಕ್ಷವನ್ನು ಬಿಟ್ಟು ಹೋಗಿರಲಿಲ್ಲ, ಇನ್ನು ಇವಾಗ ಬೇರೆ ಪಕ್ಷಕ್ಕೆ ಹೋಗುವ ಚಿಂತೆ ಮಾಡ್ತೀನಾ..? ರಾಜೀನಾಮೆ ನೀಡಿದ್ರು, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೆಲವು ವ್ಯಕ್ತಿಗಳಿಂದ ಕೆಟ್ಟದ್ದು ಆಗಿರಬಹುದು, ಆದರೆ ಪಾರ್ಟಿ ಏನು ನನಗೆ ಕೆಟ್ಟದ್ದು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪರಗಿಂತ ಬಸವರಾಜ ಬೊಮ್ಮಾಯಿ ಅವರು ಆತ್ಮೀಯರು, ಅವ್ರ ಜೊತೆ ನಾನು ತುಂಬಾ ಚೆನ್ನಾಗಿದ್ದೇನೆ. ಬೊಮ್ಮಾಯಿ ಅವರ ಮೇಲೆ ನಮಗೆ ತುಂಬಾ ನಂಬಿಕೆ ಇದೆ. ಅವ್ರ ಜೊತೆ ಇದ್ದು ಪಕ್ಷವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದ ಅವರು ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದರು.