ಬೆಂಗಳೂರು: ಇದೇ ಅಕ್ಟೋಬರ್ ತಿಂಗಳಲ್ಲೇ ಮಕ್ಕಳಿಗೆ ಕೋವಿಡ್ ಲಸಿಕೆ ದೊರಕುವ ಸಾಧ್ಯತೆಗಳಿವೆ ಎಂದು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ: ಕೆ ಸುಧಾಕರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಝೈಡಸ್ ಡಿ ಮೂರನೇ ಹಂತದ ಟ್ರಯಲ್ ಈಗಾಗಲೇ ಕೊನೆಯ ಹಂತ ತಲುಪಿದೆ. ಇವತ್ತು ಅಥವಾ ನಾಳೆ ದರ ನಿಗದಿ ಆಗುವ ಸಾಧ್ಯತೆಗಳಿದ್ದು, ಕೇಂದ್ರ ಸರಕಾರ ಘೋಷಣೆ ಮಾಡಲಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಕೋವಿಡ್ ಪ್ರಮಾಣ ಆತಂಕಕಾರಿ ಆಗಿಲ್ಲ. ಶಾಲೆಗಳಲ್ಲಿ ಮಕ್ಕಳ ಚಟುವಟಿಕೆ ಕುರಿತು ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ ಅವರು, ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಮೊದಲೇ ದೊಡ್ಡ ಪ್ರಮಾಣದ ಸಭೆ, ಸಮಾರಂಭಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇರಳ, ಮಹಾರಾಷ್ಟ್ರ ಮತ್ತಿತರ ಕಡೆ ಕೋವಿಡ್ ಪ್ರಮಾಣ ಕಡಿಮೆ ಆಗಿಲ್ಲ. ಆದ್ದರಿಂದ ಅಲ್ಲಿಂದ ಬಂದವರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಪಡೆಯುವುದು ಅನಿವಾರ್ಯವಾಗಿದೆ. ಮೂರನೇ ಅಲೆ ತಡೆಯುವ ಉದ್ದೇಶ ಇದರ ಹಿಂದಿದೆ ಎಂದು ತಿಳಿಸಿದರು.