ಬೆಂಗಳೂರು : ಬೆಂಗಳೂರು ನಗರದಲ್ಲಿ ಇಂದು ವಿಶೇಷವಾದ ಪ್ರತಿಭಟನೆ ನಡೆಯಿತು. ಮೂಕ ಪ್ರಾಣಿಗಳ ಹಕ್ಕುಗಳಿಗಾಗಿ ಹಲವರು ತಮ್ಮ ಧ್ವನಿ ಎತ್ತಿದ್ದರು. ಗಾಂಧಿ ಜಯಂತಿ ದಿನವಾದ ಇಂದು ಅನೇಕರು ಮೂಕ ಪ್ರಾಣಿಗಳ ಹಕ್ಕಿಗಾಗಿ ಹೋರಾಟ ನೆಡೆಸಿದರು.
ಸ್ವಯಂ ಸೇವಕರು, ಶ್ವಾನಗಳ ಮಾಲೀಕರು ಮತ್ತು ಪ್ರಾಣಿ ಪ್ರಿಯರು ಸಮಾವೇಶಗೊಂಡು, ಪ್ರಾಣಿಗಳ ಹಕ್ಕಿಗಾಗಿ ಹೋರಾಟ ನಡೆಸಿದರು. ಹೆಬ್ಬಾಳ ಕೃಷಿ ವಿವಿ ಕ್ಯಾಂಪಸ್ ನಲ್ಲಿರುವ ಕರುಣಾ ಅನಿಮಲ್ ಷೆಲ್ಟರ್ ಮುಂದೆ ಪ್ರತಿಭಟನೆ ನಡೆಸಿದರು.

ಕರುಣಾ ಸಂಸ್ಥೆಯು ಪ್ರಾಣಿಗಳ ಹಕ್ಕುಗಳನ್ನು ದಮನ ಮಾಡುತ್ತಿದೆ ಹಾಗೂ ಮೂಕ ಪ್ರಾಣಿಗಳ ಕುರಿತು ಕ್ರೂರವಾಗಿ ನಡೆದು ಕೊಳ್ಳುತ್ತಿದೆ ಎಂದು ಆರೋಪಿಸಿ ಭಿತ್ತಿ ಪತ್ರ ಪ್ರದರ್ಶಿಸಿ, ಸಂಸ್ಥೆಯ ವಿರುದ್ದ ಕ್ರಮವಹಿಸುವಂತೆ ಆಗ್ರಹಿಸಿದರು.

ಸಂಸ್ಥೆಯಲ್ಲಿರುವ ಸಮಸ್ಯೆಗಳ ಬಗ್ಗೆ ಕಳೆದ ಜುಲೈ 27 ರಂದು ಪಶು ಸಂಗೋಪನಾ ಇಲಾಖೆಗೆ ದೂರು ನೀಡಿದ್ದೆವು ಎಂದು ಹೋರಾಟದ ನೇತೃತ್ವ ವಹಿಸಿದ್ದ ಗಿರಿಧರ್ ವಿಜಯ್ ತಿಳಿಸಿದ್ದಾರೆ. ಈ ದೂರಿನ ಮೇಲೆ ತನಿಖೆ ಆರಂಭಿಸಿದ ಇಲಾಖೆ, ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಯಾವುದೇ ಪ್ರಾಣಿಗಳ ಬಗ್ಗೆ ಕ್ರೂರತನದಿಂದ ವರ್ತಿಸಬಾರದು ಎಂದು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ನೂರಾರು ಮೂಕ ಪ್ರಾಣಿ ಪ್ರಿಯರು ಪ್ರತಿಭಟನೆ ನಡೆಸಿ, ಸಂಸ್ಥೆಯಲ್ಲಿ ನಡೆಯುತ್ತಿರುವ ಕ್ರೂರತನವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು. ಗಿರಿಧರ್ ವಿಜಯ್ ಮತ್ತು ಆಲ್ಫ್ರೆಡ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.