ಬೆಂಗಳೂರು : ಗಾಂಧಿ ಜಯಂತಿ ಅಂಗವಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೆಲವು ಸಚಿವ ಸಹದ್ಯೋಗಿಗಳೊಂದಿಗೆ ಗಾಂಧಿ ಪಾರ್ಕ್ ನಲ್ಲಿರುವ ಖಾದಿ ಎಂಪೋರಿಯಂ ಭೇಟಿ ನೀಡಿ ತಮ್ಮ ಪತ್ನಿಗೆ ಸೀರೆ ಖರೀದಿ ಮಾಡಿದರು.
ಸಂಕಷ್ಟದಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಂಘ-ಸಂಸ್ಥೆಗಳಿಗೆ ಆರ್ಥಿಕ ಬಲ ನೀಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಖಾದಿ ಭಂಡಾರಗಳಿಗೆ ಭೇಟಿ ನೀಡಿ ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸುವಂತೆ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್. ನಾಗರಾಜು ಎಂ.ಟಿ.ಬಿ ಅವರು, ಸ್ವತಃ ತಾವೇ ಅದಕ್ಕೆ ಮೇಲ್ಪಂಕ್ತಿ ಹಾಕಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರುಗಳನ್ನು ಕರೆದೊಯ್ದು ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳನ್ನು ಖರೀದಿಸಿದರು.

ಈ ಮಳಿಗೆಯನ್ನು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ತಂದೆ ಎಸ್. ಆರ್. ಬೊಮ್ಮಾಯಿ, ಅವರು (ಅಂದಿನ ಹಣಕಾಸು ಸಚಿವರು) 15.11.1984ರಲ್ಲಿ ಉದ್ಘಾಟಿಸಿದ್ದರು.
ಎಂಪೋರಿಯಂನಲ್ಲಿನ ಮಾರಾಟಗಾರರಿಗೆ ಅತ್ಯುತ್ತಮವಾದ ಸೀರೆ ನೀಡುವಂತೆ ಕೇಳಿದಾಗ, ಅವರು ಹಲವು ಬಣ್ಣದ ಸೀರೆಗಳನ್ನು ತೋರಿಸಿದರು. ಮೂರು ಸೀರೆಗಳನ್ನು ನೋಡಿ ನಂತರ ಒಂದು ಸೀರೆಯನ್ನು ಖರೀದಿಸಿದರು. ತಮ್ಮ ಪತ್ನಿಗೆ 16031 ರೂಪಾಯಿ ಬೆಲೆಯ ಸೀರೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖರೀದಿ ಮಾಡಿದರು.
ಸೀರೆ ಖರೀದಿ ವೇಳೆ ತಮ್ಮ ಜತೆಯಲ್ಲಿದ್ದ ಸಚಿವರಿಗೂ ಸೀರೆ ಕೊಳ್ಳುವಂತೆ ಸೂಚಿಸಿದರು, ಸಚಿವ ಎಂಟಿಬಿ ನಾಗರಾಜ್ ಅವರೂ ತಮ್ಮ ಪತ್ನಿಗೆ ಒಂದು ಸೀರೆಯನ್ನು ಖರೀದಿ ಮಾಡಿದರು. ಮೂರು ಸಾವಿರ ರೂಪಾಯಿ ಬೆಲೆಯ ಸೀರೆಯನ್ನು ನಾಗರಾಜ್ ಖರೀದಿಸಿದರು.
ನಂತರ ಜತೆಯಲ್ಲಿದ್ದ ಸಚಿವರಾದ ಗೋವಿಂದ ಕಾರಜೋಳರಿಗೆ ಸೀರೆ ತೆಗೆದುಕೊಳ್ಳಿ ಎಂದು ಹೇಳಿದರು, ಅದಕ್ಕೆ ಅವರು ಸಾರ್, ನನಗೆ ಅದೆಲ್ಲಾ ಗೊತ್ತಾಗಲ್ಲ ಎಂದ ಸಚಿವ ಗೋವಿಂದ ಕಾರಜೋಳ, ಈಗಲಾದ್ರೂ ಕಲಿತುಕೊಳ್ಳಿ ಎಂದ ಸಿಎಂ ಬಸವರಾಜ ಬೊಮ್ಮಾಯಿ.

ಸಿಎಂ ಮಾತಿಗೆ ಕಟ್ಟು ಬಿದ್ದು ಇರಲೀ, ನನಗೊಂದು ಸೀರೆ ಕೊಡಿ ಎಂದು ಸಚಿವ ಗೋವಿಂದ ಕಾರಜೋಳ, ಅವರು
ಒಂದು ಸೀರೆ ಖರೀದಿಸಿದರು. ಇದೇ ವೇಳೆ ಎಂಪೋರಿಯಂಗೆ ಆಗಮಿಸಿದ ಬಿ.ವೈ. ವಿಜಯೇಂದ್ರ ಅವರಿಗೂ ಒಂದು ಸೀರೆ ಖರೀದಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಬಾರಪ್ಪಾ, ಮನೆಯವರಿಗೆ ಸೀರೆ ಖರೀದಿ ಮಾಡು ಎಂದ ಸಿಎಂ, ಸಿಎಂ ಮಾತಿಗೆ ನಮಗೊಂದು ಸೀರೆ ಕೊಡಿ ಎಂದ ಬಿ. ವೈ. ವಿಜಯೇಂದ್ರ, ಅವರು ತಮ್ಮ ಪತ್ನಿಗೆ 4,300 ರೂಪಾಯಿ ಬೆಲೆಯ ಸೀರೆಯನ್ನು ಖರೀದಿ ಮಾಡಿದರು.
ಮುಖ್ಯಮಂತ್ರಿಗಳು ಮತ್ತು ಸಚಿವರುಗಳ ಭರ್ಜರಿ ಖರೀದಿಯಿಂದ ಪ್ರೇರಣೆಗೊಂಡಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ,ಖಾದಿ ಮತ್ತು ಗ್ರಾಮೋದ್ಯಮದ ಉತ್ಪನ್ನಗಳ ಖರೀಯ ಭರಾಟೆ ಭರ್ಜರಿಯಾಗಿ ನಡೆಯಿತು.
ನೋಂದಣಿಯಾದ ಖಾದಿ ಭಂಡಾರಗಳಲ್ಲಿ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿ ವಸ್ತ್ರಗಳ ಮೇಲೆ ಗರಿಷ್ಠ ಶೇಕಡ 35 ರಷ್ಟು ಮತ್ತು ರೇಷ್ಮೆ ಖಾದಿಯ ಮೇಲೆ ಶೇಕಡ 20 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
ರಾಜ್ಯದಲ್ಲಿ 166 ಖಾದಿ ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, 20 ಸಾವಿರಕ್ಕೂ ಅಧಿಕ ನೂಲುವವರು, ನೇಕಾರರು, ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಶೇಕಡ 60ಕ್ಕೂ ಹೆಚ್ಚು ಮಹಿಳೆಯರು ಎನ್ನುವುದು ಗಮನಿಸಬೇಕಾದ ಅಂಶ.




