ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಹಾಳಾಗಿದೆ : ಮೋದಿ ವಿರುದ್ಧ ಮಾತನಾಡಿದರೆ ಜೈಲಿಗೆ : ಸಿದ್ದರಾಮಯ್ಯ ಟೀಕೆ

ಬೆಂಗಳೂರು : ಇಂದು ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಉಳಿದಿದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವವರಿಗೆ ದೇಶದ್ರೋಹದ ಸುಳ್ಳು ಆಪಾದನೆಯಡಿ ಜೈಲಿಗೆ ಹಾಕಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದು ಹತ್ತು ತಿಂಗಳುಗಳಿಂದ ರೈತರು ದೇಶಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಮಾತುಕತೆಯ ಬದಲು, ಕ್ರೌರ್ಯ ಮತ್ತು ಬಲಪ್ರಯೋಗದ ಮೂಲಕ ಅವರ ಹೋರಾಟವನ್ನು ಅಂತ್ಯಗೊಳಿಸಲು ಹೊರಟಿದೆ ಎಂದು ಟಿಕೀಸಿದರು.
ಇಂದು ಮಹಾತ್ಮ ಗಾಂಧಿಯವರ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವನ್ನು ಆಚರಣೆ ಮಾಡಿದ್ದೇವೆ. ಈ ಇಬ್ಬರು ಧೀಮಂತ ನಾಯಕರ ತ್ಯಾಗ, ಬಲಿದಾನವನ್ನು ಈ ದಿನ ನಾವು ಸ್ಮರಿಸಬೇಕಾಗಿದೆ, ರಾಷ್ಟ್ರ ಕಂಡ ಅಪರೂಪದ ಹಾಗೂ ಧೀಮಂತ ವ್ಯಕ್ತಿತ್ವ ಮಹಾತ್ಮ ಗಾಂಧಿ ಅವರದು. ದಕ್ಷಿಣ ಆಫ್ರಿಕಾದಲ್ಲಿ ವಕೀಲ ವೃತ್ತಿ ನಡೆಸುವಾಗಲೇ ಅಲ್ಲಿನ ಭಾರತೀಯರ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ, ಶೋಷಿತರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದರು ಎಂದು ಗಾಂಧಿಯವರನ್ನು ಸ್ಮರಿಸಿದರು.


ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಗೋಖಲೆ ಅವರು ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸಲು ಮಹಾತ್ಮ ಗಾಂಧಿ ಅವರೇ ಸೂಕ್ತ ವ್ಯಕ್ತಿ ಎಂದು ಮನಗಂಡು ಅವರ ಮನವೊಲಿಸಿ ಭಾರತಕ್ಕೆ ಕರೆತಂದರು.
ಭಾರತಕ್ಕೆ ಬಂದ ನಂತರ ಗಾಂಧಿಯವರು ಮೊದಲು ದೇಶದ ನಗರ, ಗ್ರಾಮ ಹೀಗೆ ಎಲ್ಲಾ ಕಡೆ ಸುತ್ತಾಡಿ, ದೇಶದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ಕಲೆಹಾಕಿದರು. ಜನರ ಸ್ಥಿತಿಗತಿಗಳ ಅರಿವೆ ಇಲ್ಲದೆ ಸ್ವಾತಂತ್ರ್ಯ ಹೋರಾಟ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವು ಗಾಂಧಿಯವರು ಮನಗಂಡಿದ್ದರು ಎಂದು ತಿಳಿಸಿದರು.
ದೇಶದ ಜನರ ಹಸಿವು, ಬಡತನವನ್ನು ಕಂಡ ಮಹಾತ್ಮ ಗಾಂಧಿಯವರು ತಾವು ಕೂಡ ಕಚ್ಚೆಪಂಚೆ ಹಾಗೂ ತುಂಡು ಬಟ್ಟೆಯನ್ನು ಮೈಮೇಲೆ ಧರಿಸುವ ಶಪಥಗೈದರು. ತಮ್ಮ ಬದುಕಿನುದ್ದಕ್ಕೂ ನುಡಿದಂತೆಯೇ ನಡೆದ ಮೇರು ವ್ಯಕ್ತಿತ್ವ ಮಹಾತ್ಮ ಗಾಂಧೀಜಿಯದು.
ಇಂದು ಗಾಂಧೀಜಿಯವರು ನಮ್ಮ ಜೊತೆ ಇಲ್ಲದಿದ್ದರೂ ಅವರ ತತ್ವಾದರ್ಶಗಳು, ವಿಚಾರಧಾರೆಗಳು ನಮ್ಮ ನಡುವೆ ಜೀವಂತವಾಗಿವೆ. ಇಂದಿಗೂ ಜಗತ್ತಿನ ಅನೇಕ ಜನ ಹೋರಾಟಗಾರರಿಗೆ ಮಹಾತ್ಮ ಗಾಂಧಿಯವರು ಸ್ಪೂರ್ತಿಯಾಗಿದ್ದಾರೆ.
ನೆಲ್ಸನ್ ಮಂಡೇಲಾ ಅವರು ಬ್ರಿಟಿಷರ ವಸಾಹತುಶಾಹಿ ಆಡಳಿತದ ವಿರುದ್ಧ ಹೋರಾಟ ನಡೆಸಲು, ದಶಕಗಳ ಕಾಲ ಸೆರೆಮನೆ ವಾಸ ಅನುಭವಿಸಲು ಸ್ಪೂರ್ತಿನೀಡಿದ್ದು ಗಾಂಧೀಜಿಯವರ ವಿಚಾರಧಾರೆ. ಹೀಗೆ ಮಾರ್ಟೀನ್ ಲೂಥರ್ ಕಿಂಗ್ ರಿಂದ ಹಿಡಿದು ಬರಾಕ್ ಒಬಾಮ ವರೆಗೆ ಜಗತ್ತಿನಾದ್ಯಂತ ಹೋರಾಟಗಾರರಿಗೆ ಗಾಂಧಿ ತತ್ವ ಇಂದಿಗೂ ದಾರಿದೀಪವಾಗಿದೆ.

ಈ ಕಾಣಕ್ಕಾಗಿಯೇ ಗಾಂಧಿಯವರು ಇಂದು ಕೇವಲ ಭಾರತಕ್ಕಷ್ಟೇ ಸೀಮಿತವಾಗಿರದೆ, ವಿಶ್ವನಾಯಕರಾಗಿದ್ದಾರೆ. ಆದರೆ ನಮ್ಮದೇ ದೇಶದ ಕೇಂದ್ರ ಸರ್ಕಾರ ಗಾಂಧಿ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ, ಅವರ ಬಗ್ಗೆ ಹಗುರಾಗಿ ಮಾತನಾಡುವ ಮೂಲಕ ಮಹಾನ್ ವ್ಯಕ್ತಿಗೆ ಅಪಮಾನ ಮಾಡುತ್ತಿದೆ.
ಗಾಂಧಿಯವರು ಸತ್ಯ ಮತ್ತು ಅಹಿಂಸೆಯ ಮಾರ್ಗ ತೋರಿದ್ದರೆ, ಭಾರತೀಯ ಜನತಾ ಪಕ್ಷ ಅಸತ್ಯ ಮತ್ತು ಹಿಂಸೆಯ ಹಾದಿಯಲ್ಲಿ ನಂಬಿಕೆ ಇಟ್ಟಿದೆ. ನರೇಂದ್ರ ಮೋದಿ ಅವರ ಮಾತು ಮತ್ತು ನಡೆ ಇವೆರಡು ತದ್ವಿರುದ್ಧವಾಗಿದೆ. ಅವರು ಏನು ಹೇಳುತ್ತಾರೋ ಅದಕ್ಕೆ ವಿರುದ್ಧವಾದ ಕೆಲಸ ಮಾಡುತ್ತಾರೆ. ಮೋದಿ ಅವರು ಯಾವುದನ್ನು ಉಳಿಸುತ್ತೇನೆ ಎನ್ನುತ್ತಾರೋ ಅದನ್ನು ನಾಶ ಮಾಡಲು ಹೊರಟಿದ್ದಾರೆ ಎಂದರ್ಥ ಎಂದು ಆರೋಪಿಸಿದರು.
ಮಹಾತ್ಮ ಗಾಂಧಿಯವರ ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆಯನ್ನು ಬಿಜೆಪಿಯವರು ದೇಶಭಕ್ತ ಎಂದು ಕರೆಯುತ್ತಾರೆ. ಇಂತಹ ಪಕ್ಷ ಅಧಿಕಾರದಲ್ಲಿ ಇದ್ದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಉಳಿಯಲು ಹೇಗೆ ಸಾಧ್ಯ?
ಲಾಲ್ ಬಹದ್ದೂರ್ ಶಾಸ್ತ್ರಿ ಅವರು “ಜೈ ಜವಾನ್, ಜೈ ಕಿಸಾನ್” ಎಂಬ ಕರೆ ನೀಡಿದರು. ರೈಲು ದುರಂತ ಸಂಭವಿಸಿದಾಗ ಘಟನೆಯ ನೈತಿಕ ಹೊಣೆ ಹೊತ್ತು ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ್ದರು. ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎಂದರೆ ತಪ್ಪಿಲ್ಲ. ಈಗಿನ ರಾಜಕಾರಣದಲ್ಲಿ ನೈತಿಕತೆ ಎಂಬುದು ಕಣ್ಮರೆಯಾಗಿದೆ.
ಶಾಸ್ತ್ರಿ ಅವರು ಪ್ರಧಾನಿಯಾದ ಮೇಲೆ ಅವರ ಮಗ ಕೆಲಸ ಮಾಡುತ್ತಿದ್ದ ಕಂಪನಿ ಮುಂಬಡ್ತಿ ನೀಡಿತು ಎಂಬ ಕಾರಣಕ್ಕೆ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಹೇಳಿ, ಕೆಲಸ ಬಿಡುವಂತೆ ಮಾಡಿದ್ದರು. ಇಂತಹಾ ಪ್ರಾಮಾಣಿಕತೆ ಈಗಿನ ರಾಜಕಾರಣಗಳಲ್ಲಿ ಕಾಣಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತದಲ್ಲಿ ದೇಶ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಇಂದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಾಂಧಿಯವರ ವಿಚಾರಧಾರೆಗಳು ನಮ್ಮ ಈ ಹೋರಾಟದ ಹಾದಿಗೆ ಬೆಳಕಾಗಲಿ ಎಂದು ಹಾರೈಸುತ್ತೇನೆ.
ಗಾಂಧೀಜಿಯವರನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಿಲ್ಲದಿದ್ದರೂ, ಅವರ ದಾರಿಯಲ್ಲಿ ಸಾಗುವ ಪ್ರಯತ್ನ ಮಾಡೋಣ. ಇದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂಬುದು ನನ್ನ ಭಾವನೆ ಎಂದರು.

More News

You cannot copy content of this page