ಬಾಲ ಬ್ರೂಯಿ ಅತಿಥಿ ಗೃಹದಲ್ಲಿ ಶಾಸಕರ ಕ್ಲಬ್ ನಿರ್ಮಾಣ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು : ಪ್ರತಿಯೊಬ್ಬರಿಗೂ ಅವರದ್ದೇ ಆದ ಕ್ಲಬ್ ಗಳಿವೆ, ಆದ್ದರಿಂದ ದೆಹಲಿ ಮಾದರಿಯಲ್ಲಿ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಕಾನ್ ಸ್ಟಿಟ್ಯೂಷನ್ ಕ್ಲಬ್ ಆಗಿ ಬಳಸಿಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಬ್ರೂಯಿ ಅತಿಥಿ ಗೃಹ ಒಂದು ಐತಿಹಾಸಿಕ ಕಟ್ಟಡ. ಅದರ ರಚನೆಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡುವುದಿಲ್ಲ, ದೆಹಲಿಯಲ್ಲಿ ಕಾನ್ ಸ್ಟಿಟ್ಯೂಷನ್ ಕ್ಲಬ್ ರಚಿಸಿರುವ ರೀತಿಯಲ್ಲಿ ಇಲ್ಲಿಯೂ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ. ನಾನು ದೆಹಲಿಗೆ ಹೋಗಿ ನೋಡಿ ಬರುತ್ತೇನೆ ಎಂದು ಸ್ಪೀಕರ್ ತಿಳಿಸಿದರು.,
ಬಾಲ ಬ್ರೂಯಿ ಅತಿಥಿ ಗೃಹದ ರಚನೆಯಲ್ಲಿ ಬದಲಾವಣೆ ಮಾಡದೇ, ಕಾನೂನಿನ ಅಡಿಯಲ್ಲೇ ಏನೇನು ಮಾಡಬೇಕು ಅದನ್ನು ಮಾಡಲಾಗುವುದು ಎಂದು ತಿಳಿಸಿದರು.
ಚಾಣಕ್ಯ ವಿವಿ ವಿಧೇಯಕ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಬಿಲ್ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ ಇರಲಿಲ್ಲ, ಆದರೆ, ಚಾಣಕ್ಯ ಯುನಿವರ್ಸಿಟಿ ಗೆ ಭೂಮಿ ನೀಡಿದ್ದು ವಿರೋಧ ಪಕ್ಷಗಳಿಂದ ಆಕ್ಷೇಪವ್ಯಕ್ತವಾಗಿದೆ. ಆದರೆ ಭೂಮಿ ನೀಡಿರುವುದು ಬಿಲ್ ನ ಭಾಗವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ಕಾಗೇರಿ, ಅವರು ಹೊರಗಡೆ ಏನೇ ಮಾಡಿಕೊಳ್ಳಲಿ, ಆದರೆ ಜಮೀನಿಗೂ ಚಾಣಕ್ಯ ವಿವಿ ಬಿಲ್ ಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು,
ಬೆಳಗಾವಿಯಲ್ಲಿ ಅಧಿವೇಶನ
ಡಿಸೆಂಬರ್ ತಿಂಗಳಲ್ಲಿ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡಬೇಕು ಅಂತ ಅಭಿಪ್ರಾಯ ವ್ಯಕ್ತವಾಗಿದೆ, ಸರ್ಕಾರದಿಂದಲೂ ಕೂಡ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಚಿಂತನೆ ನಡೆದಿದೆ ಎಂದು ಸ್ಪೀಕರ್ ತಿಳಿಸಿದರು.
ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ವಿಷಯದ ಕುರಿತು ಓಂ ಬಿರ್ಲಾ ಅವರಿಗೆ ಆಹ್ವಾನ ಮಾಡಿದ್ದೆವು, ಕರ್ನಾಟಕದ ವಿಧಾನಸಭಾ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು, ಸಂಸದೀಯ ವ್ಯವಸ್ಥೆ ಬಗ್ಗೆ ಕಾಲಕಾಲಕ್ಕೆ ಸಿಂಹಾವಲೋಕನ ಮಾಡಬೇಕು, ದೋಷಗಳು ದೌರ್ಬಲ್ಯಗಳು ಸಮಾಜದಲ್ಲಿ ಯಾವ ಯಾವ ರೀತಿಯಲ್ಲಿವೆ ಎನ್ನುವುದನ್ನು ನೋಡಬಹುದು. ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಬೇಕಾಗಿದ್ದು ನಮ್ಮ ಜವಾಬ್ದಾರಿ ಆದ್ದರಿಂದ ಈಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಓಂ ಬಿರ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸೋದಿಲ್ಲ ಅಂತ ಹೇಳಿದ್ರು, ಅವರು ಭಾಗವಹಿಸಿದ್ದರೆ ಇನ್ನು ಚೆನ್ನಾಗಿರುತ್ತಿತ್ತು ಅಭಿಪ್ರಾಯಪಟ್ಟ ಕಾಗೇರಿ, ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿದ್ದು ಕೂಡ ವಿಶೇಷವಾಗಿತ್ತು ಎಂದರು.

More News

You cannot copy content of this page