ಬೆಂಗಳೂರು : ಬಿಜೆಪಿಯ ಅನೇಕ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ವಿಚಾರವನ್ನೇ ಕಾಂಗ್ರೆಸ್ ಮುಖಂಡರು ಬಂಡವಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಬಗ್ಗೆ ಗೊತ್ತಿದ್ದವರು ಆ ಪಕ್ಷಕ್ಕೆ ಎಂದೂ ಸೇರುವುದಿಲ್ಲ, ಬಿಜೆಪಿಯ ಯಾರೊಬ್ಬರೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, “ಕಾಂಗ್ರೆಸ್‍ನ ಶಾಸಕರು ನನ್ನನ್ನು ಸಂಪರ್ಕಿಸಿದ್ದಾರೆ. ನಮಗೆ ಬೇಡ್ರಪ್ಪಾ ನೀವು, ಬರೋದಾದರೆ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಸಂಪರ್ಕಿಸಿ” ಎಂದು ಹೇಳಿ ಕಳುಹಿಸಿದ್ದೇನೆ ಎಂದರು.
ರಾಜಕಾಲುವೆ ತೆರವು, ಚರಂಡಿ ಸರಿಪಡಿಸುವ ಕಾರ್ಯದ ಕುರಿತು ಮುಖ್ಯಮಂತ್ರಿಗಳು ಸಭೆಯಲ್ಲಿ ಸ್ಪಷ್ಟ ಆದೇಶ ನೀಡಿದ್ದಾರೆ. ಅದರಂತೆ ಕೆಲಸಗಳು ನಡೆಯುತ್ತಿವೆ. ನಿನ್ನೆ ತೀವ್ರ ಮಳೆ ಬಿದ್ದ ಕಾರಣ ಕೆಲವೆಡೆ ಸ್ವಲ್ಪ ಸಮಸ್ಯೆ ಆಗಿದೆ. ಆ ಸಮಸ್ಯೆ ಬಗ್ಗೆ ಮಧ್ಯರಾತ್ರಿ ಸಂಬಂಧಿಸಿದ ಎಂಜಿನಿಯರ್ ಗಳಿಗೆ ತಿಳಿಸಿದ್ದು, ತಕ್ಷಣವೇ ಅವರು ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 20 ಸಾವಿರ ಕೋಟಿ ಹಣದಲ್ಲಿ ವಿವಿಧೆಡೆ ವೈಟ್ ಟಾಪಿಂಗ್, ಡಾಂಬರೀಕರಣ ಕೆಲಸ ನಡೆಯುತ್ತಿಲ್ಲವೇ? ಸಮಗ್ರ ಬೆಂಗಳೂರಿಗೆ ಸಂಬಂಧಿಸಿದ ಕಾಮಗಾರಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಸದನದಲ್ಲಿ 20 ಸಾವಿರ ಕೋಟಿ ಮೊತ್ತದ ವಿಚಾರ ಹೇಳಿದ್ದಾರೆ. ಕೇವಲ ರಸ್ತೆಗಳ ಗುಂಡಿ ಮುಚ್ಚುವ ಬಗ್ಗೆ ಮುಖ್ಯಮಂತ್ರಿಗಳು ಹೇಳಿಲ್ಲ. 12ಕ್ಕೂ ಹೆಚ್ಚು ರಸ್ತೆಗಳ ಕೆಲಸ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.