ಬೆಂಗಳೂರು : ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರದಲ್ಲಿ ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಬದ್ದವಾಗಿದೆ, ಕೆಲವರಿಗೆ ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರವನ್ನು ಪ್ರತಿಷ್ಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಕೆಲವರು ಖಾಸಗಿಯವರಿಗೆ ಕೊಡಿ ಅಂತ ಒತ್ತಾಯ ಮಾಡುತ್ತಿದ್ದಾರೆ ಎಂದು ಸಕ್ಕರೆ ಹಾಗೂ ಜವಳಿ, ಕೈಮಗ್ಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದುವರೆಗೆ ಮೈಶುಗರ್ ಸಕ್ಕರೆ ಕಾರ್ಖಾನೆಗೆ 550 ಕೋಟಿ ರೂಪಾಯಿ ಹಣ ನೀಡಲಾಗಿದೆ. ಅದನ್ನು ಯಾವುದಕ್ಕೆಲ್ಲ ಖರ್ಚು ಮಾಡಲಾಗಿದೆ ಎನ್ನುವುದರ ಕುರಿತು ಲೆಕ್ಕ ಬಂದನಂತರ ಕ್ಯಾಬಿನೆಟ್ ನಲ್ಲಿ ಇಚ್ಚು ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರೈತರ ಹಿತಕ್ಕಾಗಿ ನಾವು ಕೆಲಸ ಮಾಡ್ತುತ್ತಿದ್ದೇವೆ, ಆದ್ರೆ ಕೆಲ ರಾಜಕೀಯ ನಾಯಕರು ಪ್ರತಿಷ್ಠೆಗೆ ಬಿದ್ದಿದ್ದಾರೆ. ಇದನ್ನು ಮೊದಲು ಬಿಡಬೇಕು ಎಂದು ಅಭಿಪ್ರಾಯಪಟ್ಟ ಅವರು, ಶೀಘ್ರವೇ ಸಿಎಂ ಜೊತೆ ಸಭೆ ಮಾಡಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇನ್ಮುಂದೆ ರಾಜ್ಯದಲ್ಲಿ ಏಕ ಕಾಲಕ್ಕೆ ಕಬ್ಬಿನ ಕಾರ್ಖಾನೆ ಪ್ರಾರಂಭ ಮಾಡಬೇಕು, ಈ ಬಗ್ಗೆ ಈಗಾಗಲೇ ಎಲ್ಲಾ ಕಬ್ಬು ಕಾರ್ಖಾನೆ ಮಾಲೀಕರ ಜೊತೆ ಚರ್ಚಿಸಲಾಗಿದೆ. ಕೆಲವರು ತಮಗೆ ಬೇಕಾದ ಸಮಯದಲ್ಲಿ ಕಾರ್ಖಾನೆ ಪ್ರಾರಂಭ ಮಾಡುತ್ತಾರೆ, ಇದರಿಂದ ಅಕ ಸಮಸ್ಯೆಗಳು ಎದುರಾಗುತ್ತವೆ, ಹೀಗಾಗಿ ಎಲ್ಲಾ ಕಾರ್ಖಾನೆಗಳಿಗೆ ಏಕ ಕಾಲಕ್ಕೆ ಪ್ರಾರಂಭ ಮಾಡಲು ಸೂಚನೆ ನೀಡಲಾಗಿದೆ ಎಂದು ಮುನೇನಕೊಪ್ಪ ಹೇಳಿದರು.

ಬಾಕಿ ವಸೂಲಿ
ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಒಟ್ಟು 47.17 ಕೋಟಿ ರೂಪಾಯಿ ಬಾಕಿ ಕಬ್ಬು ಬೆಳೆಗಾರರಿಗೆ ನೀಡಬೇಕಿತ್ತು. ಬೆಳಗಾವಿ, ಬೆಂಗಳೂರಿನಲ್ಲಿ ಕಾರ್ಖಾನೆ ಮಾಲೀಕರಜತೆ ಚರ್ಚಿಸಿ ಬಾಕಿ ಹಣ ನೀಡಲು ಸೂಚನೆ ನೀಡಲಾಗಿತ್ತು. ಅದರಂತೆಯೇ 3 ದಿನಗಳಲ್ಲಿ 26.26 ಕೋಟಿ ಹಣ ಸರ್ಕಾರಕ್ಕೆ ಪಾವತಿಯಾಗಿದೆ, ಇನ್ನು 15.91 ಕೋಟಿ ರೂಪಾಯಿ ಬರಬೇಕಾಗಿದೆ, ಇದು ಶೀಘ್ರದಲ್ಲೇ ಸರ್ಕಾರದ ಬೊಕ್ಕಸಕ್ಕೆ ಬರಲಿದೆ ಎಂದು ತಿಳಿಸಿದರು.

ಬಸವೇಶ್ವರ ಶುಗರ್ ಹಾಗೂ ಕೋರ್ ಬೀನ್ ಶುಗರ್ಸ್ ಬಾಕಿ ಹಣ ಕೊಟ್ಟಿಲ್ಲ, ಹೀಗಾಗಿ ಎರಡು ಕಾರ್ಖಾನೆಗಳಿಗೆ ರಿಕವರಿ ನೋಟೀಸ್ ನೀಡಲಾಗಿದೆ,ಆದಷ್ಟು ಬೇಗನ್ ಅವರೂ ಹಣ ಸಂದಾಯ ಮಾಡಲಿದ್ದಾರೆ ಎಂದು ವಿವರಿಸಿದ ಅವರು, 2020-21 ನೇ ಸಾಲಿನಲ್ಲಿ ಮಾತ್ರ ಬಾಕಿ ಇತ್ತು. ಹಿಂದಿನದ್ದು ಎಲ್ಲಾ ಪಾವತಿಯಾಗಿದೆ. ರೈತ ಕಬ್ಬು ಕೊಟ್ಟಾಗ ಕಾರ್ಖಾನೆಗಳು ಹಣ ಕೊಡಬೇಕು, ರೈತರ ಹಿತ ಕಾಪಾಡೋದು ನಮ್ಮ ಉದ್ದೇಶ ಎಂದು ಸಚಿವರು ತಿಳಿಸಿದರು.
ಕಬ್ಬು ದರ ಹೆಚ್ಚಳ ಶೀಘ್ರದಲ್ಲೇ ನಿರ್ಧಾರ
ಕಬ್ಬು ದರ ಹೆಚ್ಚಳ ಸಂಬಂಧ ಕೇಂದ್ರದ ಮಂತ್ರಿಗಳ ಜತೆ ಎರಡು ಬಾರಿ ಭೇಟಿಯಾಗಿ ಚರ್ಚಿಸಲಾಗಿದೆ, ಮತ್ತೊಮ್ಮೆ ಚರ್ಚಿಸಿ ಹೆಚ್ವಳ ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ ಮುನೇನಕೊಪ್ಪ, ನಾವು ರೈತರ ಪ್ರತಿಭಟನೆಯನ್ನ ಹತ್ತಿಕ್ಕೋದಿಲ್ಲ, ವಿಧಾನಸೌಧದಕ್ಕೆ ಬಂದರೆ ನಾನೇ ಸರ್ಕಾರ ಪರ ಹೋಗಿ ಮನವಿ ಸ್ವೀಕಾರ ಮಾಡ್ತೀನಿ ಎಂದು ತಿಳಿಸಿದರು.




