ನವದೆಹಲಿ : ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕರೆ ಮಾಡಿ ಭೇಟಿ ಮಾಡಲು ತಿಳಿಸಿದ ಹಿನ್ನಲೆಯಲ್ಲಿ ಅವರನ್ನು ಭೇಟಿ ಮಾಡಲಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಎರಡು ಉಪಚುನಾವಣೆ ಹಾಗೂ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುಮಾರು ಒಂದೂವರೆ ಗಂಟೆಗೂ ಅಧಿಕ ಕಾಲ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ರಾಷ್ಟ್ರ ರಾಜಕಾರಣಕ್ಕೆ ತೆರಳುವ ಮಾತುಗಳು ಕೇಳಿಬರುತ್ತಿವೆಯಲ್ಲ ಎಂಬ ಪ್ರಶ್ನಿಗೆ ಉತ್ತರಿಸಿದ ಅವರು ರಾಷ್ಟ್ರ ರಾಜಕಾರಣದ ಬಗ್ಗೆ ಆಸಕ್ತಿಯಿಲ್ಲ, ಅವೆಲ್ಲಾ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ರಾಹುಲ್ ಗಾಂಧಿ ನನ್ನನ್ನು ರಾಷ್ಟ್ರ ರಾಜಕಾರಣಕ್ಕೆ ಕರೆದಿದ್ರು, ಜನರಲ್ ಸೆಕ್ರಟರಿ ಆಗು ಎಂದಿದ್ರು, ಆದರೆ ನಾನು ನನಗೆ ಬೇಡ ಎಂದಿದ್ದಕ್ಕೆ ವರ್ಕಿಂಗ್ ಕಮಿಟಿ ಮೆಂಬರ್ ಮಾಡಿದ್ರು, ನಾನು ಅದಕ್ಕೂ ರಾಜೀನಾಮೆ ಕೊಟ್ಟಿದ್ದೆ ಎಂದು ವಿವರಿಸಿದರು.
ಮುಂಬರುವ ಪಂಚರಾಜ್ಯಗಳ ಚುನಾವಣೆಗೆ ತಮ್ಮನ್ನು ಬಳಸಿಕೊಳ್ಳುವ ವಿಚಾರವಾಗಿಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ವಿಚಾರದ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದರು. ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಪಟ್ಟಿ ನೀಡಲಾಗಿದೆ, ಅವರು ಕರೆದು ಮಾತನಾಡುವಾಗ ವಿವರಣೆ ನೀಡುತ್ತೇನೆ ಎಂದರು.
ಬೇರೆ ಏನು ಚರ್ಚಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಏನು ಮಾತನಾಡಿದ್ದೆ ಅಂತ ನಿಮಗೆ ಹೇಳೋಕೆ ಆಗುತ್ತಾ ಎಂದು ಸಿಟ್ಟಿನಿಂದಲೇ ಹೇಳಿ ನಿರ್ಗಮಿಸಿದರು. ಶಾಸಕ ಜಮೀರ್ ಅಹಮದ್ ಖಾನ್ ಸಿದ್ದರಾಮಯ್ಯ ಅವರ ಜತೆಯಲ್ಲಿದ್ದರು.