ಶಿವಮೊಗ್ಗ : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೆಸರು ದುರ್ಬಳಕೆ ಮಾಡಿಕೊಂಡು ಲಕ್ಷಾಂತರ ರೂಪಾಯಿ. ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಐವರ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಐವರು ಆರೋಪಿಗಳು ತಾವು ಸಚಿವ ಈಶ್ವರಪ್ಪ ಅವರ ಆಪ್ತರು ಎಂದು ಹೇಳಿ ಮೈಸೂರಿನ ರಾಜೇಶ್ ಮತ್ತು ಶಿವಮೊಗ್ಗದ ಲಕ್ಷ್ಮಣ್ ಅವರಿಗೆ ವಂಚಿಸಿದ್ದಾರೆ ಎಂದು ಅವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

ಮೈಸೂರಿನ ಸಿವಿಲ್ ಎಂಜಿನಿಯರ್ ರಾಜೇಶ್ ಎಂಬುವವರಿಗೆ ನೂರು ಕೋಟಿ ರೂ. ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ. ವಿಲ್ಲಾ ಪ್ರಾಜೆಕ್ಟ್ ಗಾಗಿ ಈ ಲೋನ್ ಕೊಡಿಸುವುದಾಗಿ ತಿಳಿಸಲಾಗಿತ್ತು. ಇದಕ್ಕಾಗಿ ಐವರು ಆರೋಪಿಗಳು ಹತ್ತು ಲಕ್ಷ ರೂ. ಪಡೆದುಕೊಂಡಿದ್ದಾರೆ ಎಂದು ರಾಜೇಶ್ ದೂರಿನಲ್ಲಿ ತಿಳಿಸಿದ್ದಾರೆ. ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
106 ವಾಟರ್ ಆರ್.ಒ. ಪ್ಲ್ಯಾಂಟ್ ಕೊಡಿಸುವುದಾಗಿ ಶಿವಮೊಗ್ಗದ ಗುತ್ತಿಗೆದಾರ ಲಕ್ಷ್ಮಣ್ ಎಂಬುವವರಿಗೆ ವಂಚಿಸಲಾಗಿದೆ. ಲಕ್ಷ್ಮಣ್ ಅವರಿಂದ 26.25 ಲಕ್ಷ ರೂ. ಹಣ ಪಡೆದುಕೊಂಡು ವಂಚನೆ ಮಾಡಲಾಗಿದೆ. ಆರ್.ಒ ಪ್ಲ್ಯಾಂಟ್ ಕೊಡಿಸದೆ ಇರುವಾಗ ಹಣ ಕೇಳಿದಾಗ ಲಕ್ಷ್ಮಣ್ ಅವರಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಲಕ್ಷ್ಮಣ್ ಅವರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಐವರ ವಿರುದ್ಧ ಪ್ರಕರಣ
ಎರಡು ಪ್ರಕರಣದಲ್ಲಿ ಐವರು ಆರೋಪಿಗಳು ತಾವು ಸಚಿವ ಈಶ್ವರಪ್ಪ ಅವರ ಆಪ್ತರು ಎಂದು ಬಿಂಬಿಸಿಕೊಂಡಿದ್ದಾರೆ. ಇದನ್ನು ನಂಬಿ ಮೈಸೂರಿನ ರಾಜೇಶ್ ಮತ್ತು ಶಿವಮೊಗ್ಗದ ಲಕ್ಷ್ಮಣ್ ಅವರು ಹಣ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಎರಡು ಪ್ರಕರಣದಲ್ಲಿ ವಿಠಲ ರಾವ್, ಮಹೊಮ್ಮದ್ ಮುಫಾಸಿರ್, ಮಂಜುನಾಥ, ಕಾಜಿವಲೀಸ್, ಮೊಹಮ್ಮದ್ ರೆಹಮಾನ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.