ಬೆಂಗಳೂರು: ‘ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ’ ಎಂಬ ಕಾಂಗ್ರೆಸ್ ನವರ ಪಾದಯಾತ್ರೆ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ಚುನಾವಣಾ ಗಿಮಿಕ್, ಇಂತಹ ಚುನಾವಣಾ ಗಿಮಿಕ್ ಗಳಿಗೆ ಜನ ಮೋಸ ಹೋಗುವುದಿಲ್ಲ. ತಂತ್ರಗಾರಿಕೆಗಳಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದಿಲ್ಲಿ ಹೇಳಿದರು.
ವಿಧಾನಸೌಧದಲ್ಲಿ ಇಂದು ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವಾಗಲೂ ‘ಕೃಷ್ಣೆಯ ನಡಿಗೆ ಸತ್ಯದ ಕಡೆಗೆ’ ಎಂಬುದನ್ನು ಪರಿಪಾಲಿಸುತ್ತಾ ಬಂದಿದೆ. ಕಾಂಗ್ರೆಸ್ ನವರ ‘ಗಾಂಧಿ ನಡಿಗೆ ಕೃಷ್ಣೆಯ ಕಡೆಗೆ’ ಉಪಚುನಾವಣೆಗೆ ಮಾತ್ರ ಸೀಮಿತ. ಅದು ನಿರ್ಲಕ್ಷ್ಯದ ಕಡೆಗೆ ಇರುತ್ತಿತ್ತು ಎಂದು ಸಚಿವರು ವ್ಯಂಗ್ಯವಾಡಿದರು.
ಮಾಜಿ ನೀರಾವರಿ ಸಚಿವ ಎಂ.ಬಿ. ಪಾಟೀಲರವರು ನಾನು “ಕೃಷ್ಣೆ ಕಾಂಗ್ರೆಸ್ ನವರ ಪಾಪದ ಕೂಸು” ಎಂದು ಹೇಳಿದ್ದೇನೆಂದು ಸುಳ್ಳು ಹೇಳಿದ್ದಾರೆ. ನಾನು ಯಾವತ್ತೂ ಹೇಳಿಲ್ಲ ಮತ್ತು ಹೇಳುವವನೂ ಅಲ್ಲ. ನಾನು ಈ ರೀತಿ ಹೇಳಿದ್ದೇನೆಂದು ಎಂ.ಬಿ.ಪಾಟೀಲರು ಸಾಬೀತು ಪಡಿಸಬೇಕು. ಇಲ್ಲದಿದ್ದರೆ ಅವರು ಬಹಿರಂಗವಾಗಿ ಕ್ಷಮೆ ಯಾಚಿಸಬೇಕೆಂದು ಸಚಿವರು ಆಗ್ರಹಿಸಿದರು.
ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕಾಂಗ್ರೆಸ್ ನವರು ಕೃಷ್ಣಾ ಮೇಲ್ದಂಡೆ ಯೋಜನೆಗಳಿಗೆ ಯಾವುದೇ ರೀತಿಯ ಸಮರ್ಪಕ ಹಣಕಾಸು ಒದಗಿಸಲಿಲ್ಲ. ಆದ್ದರಿಂದಾಗಿ ಈ ಯೋಜನೆಗಳು ಕುಂಟುಂತ್ತಾ ತೆವಳುತ್ತಾ ಜನರಿಗೆ ಯಾವುದೇ ರೀತಿಯ ಸಹಾಯವಾಗದ ರೀತಿಯಲ್ಲಿ ಮುನ್ನಡೆದವು ಎಂದು ಆರೋಪಿಸಿದರು.
ಪ್ರತಿಯೊಂದು ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನವರು ಗಿಮಿಕ್ ಗಳನ್ನು ಮಾಡುತ್ತಾರೆ. ಈಗ ಸಿಂಧಗಿ ಹಾಗೂ ಹಾನಗಲ್ ಉಪಚುನಾವಣೆ ಮತ್ತು ಡಿಸೆಂಬರ್ ಹೊತ್ತಿಗೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಚುನಾವಣೆ ಬರುವುದರಿಂದ ಈ ಹೊಸ ನಾಟಕ ಪ್ರಾರಂಭಿಸಿದ್ದಾರೆ. ಗಾಂಧೀಜಿಯವರ ಹೆಸರನ್ನು ಯಾಕೆ ದುರುಪಯೋಗ ಮಾಡಿಕೊಳ್ಳುತ್ತಾರೆಂಬುದು ಗೊತ್ತಿಲ್ಲ ಎಂದುಟಾಂಗ್ ನೀಡಿದರು.
ಕಾಂಗ್ರೆಸ್ ನವರಿಗೆ ಗಾಂಧೀಜಿಯವರ ಹೆಸರನ್ನು ಹೇಳುವಂತಹ ನೈತಿಕತೆಯೇ ಇಲ್ಲ ಎಂದು ಸಚಿವರು ಟೀಕಿಸಿದರು. ಕಾಂಗ್ರೆಸ್ ನವರು ಜನರಿಗೆ ಮೋಸವಾಡಿರುವಂತಹದ್ದು ಇತಿಹಾಸ ಎಂದು ಸಚಿವರು ಹೇಳಿದರು. ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಮತ್ತು ಭೂಸ್ವಾಧೀನ ಕಾಮಗಾರಿಗಳಿಗೆ ಹಣ ನೀಡದೇ 20 ಹಳ್ಳಿಗಳನ್ನು ಸ್ಥಳಾಂತರ ಮಾಡದೇ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲಿಲ್ಲ. ಇದರಿಂದಾಗಿ ನಮ್ಮ ಕೃಷ್ಣೆ ಕಣ್ಣೀರು ಸುರಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.