ಬೆಂಗಳೂರು : ಬೆಂಗಳೂರು ಬೇಗೂರು ಠಾಣಾ ವ್ಯಾಪ್ತಿಯ ಚೌಡೇಶ್ವರಿ ಲೇ ಔಟ್ ನಲ್ಲಿ ತಾಯಿ ಹಾಗೂ ಎರಡೂವರೆ ವರ್ಷದ ಮಗುವಿನ ಬರ್ಬರ ಹತ್ಯೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಂದು ಮುಂಜಾನೆ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳು ಚಾಕುವಿನಿಂದ ಇಬ್ಬರಿಗೂ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದವರನ್ನು ಯಮುನಾ 40 ವರ್ಷ, ಹಾಗೂ ಆಕೆಯ ಎರಡೂವರೆ ವರ್ಷದ ಕಂದಮ್ಮ ತಾನ್ಯ ಮೃತರಾಗಿದ್ದಾರೆ. ಮನೆಯ ಹಾಲ್ ನಲ್ಲಿ ತಾಯಿಯ ಮೃತ ದೇಹ ಬಿದ್ದಿದ್ದರೇ, ಮಗಳ ದೇಹ ಬೆಡ್ ರೂಮ್ ನಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂವರೆ ವರ್ಷದ ಮುದ್ದು ಕಂದಮ್ಮನನ್ನು ತಾಯಿಯ ಜತೆ ಕೊಲೆಮಾಡಲಾಗಿದೆ. ಇಂದು ಸಂಜೆ ಸಂಬಂಧಿಕರು ಅವರ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಗಂಡ ಮುಂಜಾನೆ ಕೆಲಸಕ್ಕೆ ಹೋದ ಬಳಿಕ ಕೊಲೆ ಆಗಿರುವ ಶಂಕಿಸಲಾಗಿದ್ದು, ಬೇಗೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ತನಿಖೆ ಕೈಗೊಂಡಿದ್ದಾರೆ.
ಮೃತರ ಪತಿ ಚನ್ನವೀರಸ್ವಾಮಿ, ಗಾರ್ಮೆಂಟ್ಸ್ ನೌಕರರಾಗಿದ್ದು, ಮೂಲತಃ ಚಿತ್ರದುರ್ಗದ ಬಂಗಾರಕ್ಕನ ಹಳ್ಳಿಯ ನಿವಾಸಿಗಳಾಗಿದ್ದಾರೆ. 4 ವರ್ಷಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ಕುಟುಂಬ ಬೇಗೂರಿನ ವಿಶ್ವ ಪ್ರಿಯಾ ಲೇಔಟ್ ನ ಸಮೀಪದ ಚೌಡೇಶ್ವರಿ ಬಡಾವಣೆಯಲ್ಲಿ ವಾಸವಾಗಿದ್ದರು.
ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.