ಬೆಂಗಳೂರು: ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವನೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.
ಹಾನಗಲ್ ಕ್ಷೇತ್ರಕ್ಕೆ ಶಿವರಾಜ್ ಸಜ್ಜನ್ ಹಾಗೂ ಸಿಂಧಗಿ ಕ್ಷೇತ್ರಕ್ಕೆ ರಮೇಶ್ ಭೂಸನೂರು ಅವರನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಸಮ್ಮತಿ ನೀಡಿದ್ದಾರೆ.
ಮೊನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಎರಡು ಕ್ಷೇತ್ರಗಳಿಗೆ ತಲಾ ಮೂರು ಅಭ್ಯರ್ಥಿಗಳ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು.ಹಾನಗಲ್ ಗೆ ರೇವತಿ ಶಿವಕುಮಾರ್ ಉದಾಸಿ ಹಾಗೂ ಶಿವರಾಜ್ ಸಜ್ಜನ್ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತು.ಅಂತೆಯೇ ಸಿಂಧಗಿಗೆ ರಮೇಶ್ ಭೂಸನೂರು ಟಿಕೆಟ್ ಖಚಿತ ಎನ್ನಲಾಗಿತ್ತು ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಹಾನಗಲ್ ಗೆ ಮಣೆ ಹಾಕಿದೆ.

ಈಗಾಗಲೇ ಈ ಕ್ಷೇತ್ರಗಳಿಗೆ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಸಿಂದಗಿ ಕ್ಷೇತ್ರಕ್ಕೆ ಅಶೋಕ ಮನಗೂಳಿ ಹಾಗೂ ಹಾನಗಲ್ ಕ್ಷೇತ್ರಕ್ಕೆ ಶ್ರೀನಿವಾಸ ವಿ ಮಾನೆ ಅವರ ಹೆಸರನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ

ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಅಕ್ಟೋಬರ್ 30 ರಂದು ಮತದಾನ ನಡೆಯಲಿದ್ದು, ನವಂಬರ್ 2 ರಂದು ಮತ ಎಣಿಕೆ ನಡೆಯಲಿದೆ.
ಹಾನಗಲ್ ಕ್ಷೇತ್ರವನ್ನು ಬಿಜೆಪಿ ಶಾಸಕ ಸಿ.ಎಂ. ಉದಾಸಿ ಪ್ರತಿನಿಧಿಸುತ್ತಿದ್ದರು. ಸಿಂಧಗಿ ಕ್ಷೇತ್ರವನ್ನು ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ಪ್ರತಿನಿಧಿಸುತ್ತಿದ್ದರು. ಅವರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ.