ರಾಜ್ಯದ 8 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಪಿ.ಪಿ.ಪಿ ಮಾದರಿಯಲ್ಲಿ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ

ಚಾಮರಾಜನಗರ : ರಾಜ್ಯದ ಎಂಟು ಜಿಲ್ಲೆಗಳಿಗೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಒಂದೂವರೆ ವರ್ಷಗಳಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಅವರು ಇಂದು ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಆಯೋಜಿಸಿರುವ 450 ಹಾಸಿಗೆಯ ಬೋಧನಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುವ ಚಾಮರಾಜನಗರ ಜಿಲ್ಲೆಯು ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ, ಹಿಂದುಳಿದ ಜಿಲ್ಲೆ ಎಂದು ಪರಿಗಣಿಸ್ಪಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.


ಜಿಲ್ಲೆ, ದೇವಸ್ಥಾನಗಳ ತವರೂರು ಕೂಡ ಹೌದು. ನಮ್ಮ ಸರ್ಕಾರ ಪ್ರ‍್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ಪಣತೊಟ್ಟಿದೆ. ಶಿಕ್ಷಣ, ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ತಾರತಮ್ಯಗಳನ್ನು ಹೋಗಲಾಡಿಸಿ, ಉಳಿದ ಜಿಲ್ಲೆಗಳಂತೆ ಮುಖ್ಯವಾಹಿನಿಗೆ ತರಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಇಲ್ಲಿ ವಿದ್ಯೆ ಕಲಿಸುವ ಎಲ್ಲಾ ಪ್ರಾಧ್ಯಾಪಕರು, ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬೇಕು. ಇಲ್ಲಿ ಕಲಿತವರು ಅತ್ಯಂತ ಯಶಸ್ವಿ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ದಾದಿಯರಾಗಿ ಹೊರಹೊಮ್ಮಬೇಕು ಎಂದರು. ನಾಡಿನ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ತಲುಪಬೇಕು. ಅದಕ್ಕೆ ಸರ್ಕಾರ ಬದ್ಧವಾಗಿದ್ದು, ಆರೋಗ್ಯ ಮೂಲಸೌಕರ್ಯ ಹೆಚ್ಚಳವಾಗಬೇಕು ಎಂದರು
ವೈದ್ಯರಿಗೂ ಹಾಗೂ ರೋಗಿಯ ಅನುಪಾತದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಿಗಿಂತಲೂ ರೋಗಿಗಳ ಮತ್ತು ಬೆಡ್ ಅನುಪಾತ ಕಡಿಮೆ ಇದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದ್ದರೆ ಶೇ 60 ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಬಹಳ ದೊಡ್ಡ ಪ್ರಮಾಣದ ಸಹಕಾರವನ್ನು ಕೊಟ್ಟಿದೆ ಎಂದು ತಿಳಿಸಿದರು.


ಕೇಂದ್ರ ಸರ್ಕಾರ ಕರೋನಾ ಉಚಿತ ಲಸಿಕೆಯನ್ನು ಪೂರೈಕೆಯಲ್ಲಿ ಸಹಕಾರ ನೀಡಿದೆ. ಈಗಾಗಲೇ ರಾಜ್ಯದ ಜನತೆಗೆ ಶೇ.80 ರಷ್ಟು ಮೊದಲನೇ ಡೋಸ್ ಹಾಗೂ ಶೇ. 30 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಡಿಸೆಂಬರ್ ಮಾಹೆಯೊಳಗೆ ರಾಜ್ಯದ ಎಲ್ಲರಿಗೂ ಲಸಿಕೆಯನ್ನು ಪೂರೈಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.
ಚಾಮರಾಜನಗರ ಜಿಲ್ಲೆಗೆ ಬಾರದೇ ಕರ್ತವ್ಯಲೋಪ ಎಸಗಲಾರೆ
ಚಾಮರಾಜನಗರ ಜಿಲ್ಲೆ ರಾಜ್ಯದ ಅವಿಭಾಜ್ಯ ಅಂಗ. ಜಿಲ್ಲೆಗೆ ಬಂದು ಇಲ್ಲಿನ ಜನತೆಗೆ ಜನ ಕಲ್ಯಾಣ ಕಾರ್ಯಕ್ರಮ ನೀಡುವುದು ನಮ್ಮ ಆದ್ಯ ಕರ್ತವ್ಯ. ಈ ಜಿಲ್ಲೆಗೆ ಬಾರದೇ ಇದ್ದು ಕರ್ತವ್ಯಲೋಪ ಎಸಗಲಾರೆ ಎಂದ ಮುಖ್ಯಮಂತ್ರಿಗಳು ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಿದಾಗ ಪರಿಣಾಮವೂ ಒಳ್ಳೆಯದೇ ಇರುತ್ತದೆ ಎಂದ ಅವರು ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

More News

You cannot copy content of this page