ಬೆಂಗಳೂರು : ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಆಪ್ತ ಸೇರಿದಂತೆ ಒಟ್ಟು ನೀರಾವರಿ ಇಲಾಖೆ 30 ಗುತ್ತಿಗೆದಾರರ ಮನೆ ಮೇಲೆ ಇಂದು ಬೆಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿಎಂಟಿಸಿಯಲ್ಲಿ ಡ್ರೈವರ್ ಆಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್, ಬಿ ಎಸ್ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕನಾಗಿದ್ದ ವೇಳೆ ಉಮೇಶ್ ಸಂಪರ್ಕ ಬೆಳೆಸಿದ್ದರು. ಆ ಬಳಿಕ ಬಿಎಸ್ ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಉಮೇಶ್ , ಬಿಎಸ್ ವೈ ಮುಖ್ಯಮಂತ್ರಿಯಾಗಿದ್ದ ವೇಳೆಯು ಆಪ್ತ ಸಹಾಯಕನ ಹುದ್ದೆ ನಿರ್ವಹಣೆ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ವ್ಯವಹಾರವನ್ನು ಉಮೇಶ್ ನೋಡಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ರಾಜಾಜಿನಗರದ ರಾಮಮಂದಿರ ಬಳಿಯಿರುವ ಉಮೇಶ್ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ಸುಮಾರು 15 ವರ್ಷದಿಂದಲೂ ಭಾಷ್ಯಂ ಸರ್ಕಲ್ ನ ಮನೆಯಲ್ಲೆ ಉಮೇಶ್ ಬಾಡಿಗೆಗಿದ್ದರು. ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸದ್ಯ ಬಾಡಿಗೆ ಮನೆಯಲ್ಲಿಯೇ ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು 10 ಜನ ಐಟಿ ಅಧಿಕಾರಿಗಳಿಂದ ಆತನ ಮನೆ ಶೋಧ ಕಾರ್ಯ ನಡೆಸಿದ್ದಾರೆ.
ರಾಮಯ್ಯ ಲೇಔಟ್, ನಾಗಸಂದ್ರ ಮೆಟ್ರೋ ಹಿಂಭಾಗದಲ್ಲಿ ಇತ್ತೀಚೆಗಷ್ಟೆ ಉಮೇಶ್ ಐಷಾರಾಮಿ ಬಂಗ್ಲೆ ಕಟ್ಟಿಸಿದ್ದ, ಉಮೇಶ್, ತನ್ನ ಬಂಗ್ಲೆಗೂ ಕೂಡ ಯಡಿಯೂರಪ್ಪನವರ ಮನೆಯ ಹೆಸರಾಗಿರುವ ಧವಳಗಿರಿ ಎಂದೇ ಹೆಸರು ಇಟ್ಟಿದ್ದ ಎನ್ನುವುದು ಇಲ್ಲಿನ ವಿಶೇಷ,
ಗುತ್ತಿಗೆದಾರರ ಮನೆ ಮೇಲೂ ದಾಳಿ
ನೀರಾವರಿ ಇಲಾಖೆಗೆ ಸಂಬಂಧಿಸಿದ ಮೂವತ್ತು ಗುತ್ತಿಗೆದಾರರ ಮನೆ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದುದಾಳಿ ನಡೆಸಿದ್ದಾರೆ. ಕಾಂಟ್ರಾಕ್ಟರ್ ಗಳ ಚಾರ್ಟೆಡ್ ಅಕೌಂಟೆಂಟ್ ಗಳು ಮತ್ತು ಅಂಗಡಿಗಳಿಗೆ ಇದ್ದ ಚಾರ್ಟೆಡ್ ಅಕೌಂಟೆಂಟ್ ಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಈ ಹಿಂದೆ ನೀರಾವರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿದ್ದ ಸುಮಾರು ಎರಡು ಸಾವಿರ ಕೋಟಿ ಮೊತ್ತದ ಹಗರಣದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ ಐದು ಗಂಟೆಗೆ ಬಂದ ಐಟಿ ಅಧಿಕಾರಿಗಳು, ಉಮೇಶ್ ಗೆ ಸಂಬಂಧಿತ ಆರು ಸ್ಥಳಗಳಲ್ಲಿ ಐಟಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆ ಮೇಲೂ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.