ಬೆಂಗಳೂರು : ನನ್ನನ್ನು ಕೆಣಕಲು ಹೋಗಬೇಡಿ, ಕೆಣಕಿದರೆ ಸರಿ ಇರಲ್ಲ ಎಂದು ಮಾಜಿ ಪ್ರಧಾನಿ ದೇವೆಗೌಡ ಅವರು ಕಾಂಗ್ರೆಸ್ ವಿರುದ್ಧ ಗುಡುಗಿದರು.
ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ದೇವೆಗೌಡ ಅವರು, ಕಾಂಗ್ರೆಸ್ ಸ್ಥಿತಿ ಎಲ್ಲಿಂದ ಎಲ್ಲಿಗೆ ಬರ್ತಾ ಇದೆ ಅಂತ ಗೊತ್ತಿದೆ, ನೆಹರು ಮತ್ತು ನಂತರದ ಕಾಲಕ್ಕೆ ಯಾವ ಯಾವ ರಾಜ್ಯದಲ್ಲಿ ಎಲ್ಲಿಗೆ ಬಂದಿದೆ ಎಂದು ಪ್ರತಿಯೊಬ್ಬರಿಗೂ ಗೊತ್ತಿದೆ ಎಂದು ತಿಳಿಸಿದರು.
ಸಿಂಧಗಿಯಲ್ಲಿ ಮನಗೂಳಿ ನಿಧನದ ಬಳಿಕ ಅವರ ಮಗನನ್ನು ಕಾಂಗ್ರೆಸ್ ನವರು ಕರೆದುಕೊಂಡು ಹೋದರು, ನಿಮಗೆ ನಮ್ಮ ಅಭ್ಯರ್ಥಿಯೇ ಬೇಕಾ?, ಬಿಜೆಪಿ ಅಭ್ಯರ್ಥಿ ಗಾಣಿಗ ಸಮುದಾಯ ಇದೆ ಅಲ್ಲ ಅವರನ್ನು ಕರೆದುಕೊಂಡು ಹೋಗಬೇಕಿತ್ತು ಎಂದು ಕಿಡಿಕಾರಿದರು.

ನಮ್ಮ ಅಭ್ಯರ್ಥಿಯನ್ನು ಹೊತ್ತುಕೊಂಡು ಹೋದರೆ ನಾವು ಸುಮ್ಮನಿರಬೇಕಾ, ಹೀಗಾಗಿ ನಾವು ನಮ್ಮ ಅಭ್ಯರ್ಥಿ ಹಾಕಿದ್ದೇವೆ ಬಿಜೆಪಿ ಗೆಲ್ಲಿಸಲು ಮುಸ್ಲಿಂ ಅಭ್ಯರ್ಥಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಮುಸ್ಲಿಂರನ್ನು ನೀವು ಗುತ್ತಿಗೆ ಪಡೆದಿಲ್ಲ ನಾನು ಬೆಳಸಿದ್ದ ಮುಸ್ಲಿಂ ಮುಖಂಡ ಈಗ ಅವರ ಬಲಗೈಯಲ್ಲಿ ನಿಂತಿಲ್ಲವಾ ಎಂದು ನೇರವಾಗಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.
ಹಿಂದಿನ ಸಮ್ಮಿಶ್ರ ಸರ್ಕಾರವಿದ್ದಾಗ ಆರ್ಥಿಕ ತಜ್ಞನಲ್ಲದ ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದರು. ಸಿದ್ದರಾಮಯ್ಯ ತಮ್ಮ ಎಲ್ಲಾ ಭಾಗ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಷರತ್ತು ಹಾಕಿದ್ದರು, ಅದನ್ನೂ ಈಡೇರಿಸಿದ್ದರು. ಸಿದ್ದರಾಮಯ್ಯ ಹಾಗೆ ಸಾಕಷ್ಟು ಬಾರಿ ಬಜೆಟ್ ಮಂಡಿಸಿಲ್ಲ, ಆದರೆ ಸಂಪನ್ಮೂಲ ಕ್ರೋಢೀಕರಿಸಿ ಯೋಜನೆ ತಂದರು, ಹಿಂದಿನ ಎಲ್ಲ ಯೋಜನೆಗಳಿಗೆ ಹಣಹೊಂದಿಸಿದರು, ಹೇಳಿದ ಮಾತನ್ನು ಕುಮಾರಸ್ವಾಮಿ ಮಾಡುತ್ತಾರೆ ಎಂಬುದನ್ನು ಸಾಬೀತು ಪಡಿಸಿದರು ಎಂದು ದೇವೇಗೌಡರು ತಿಳಿಸಿದರು.
ಹಾನಗಲ್ ಹಾಗೂ ಸಿಂದಗಿಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ, ಬಸವಕಲ್ಯಾಣದಲ್ಲೂ ಮುಸ್ಲಿಂ ಅಭ್ಯರ್ಥಿ ಹಾಕಲಾಗಿದೆ, ನಾರಾಯಣರಾವ್ ಕೂಡ ನನ್ನ ಶಿಷ್ಯ ಜಾತಿ ನೋಡಿ ನಾನು ಬೆಳೆಸಲಿಲ್ಲ, ಯಾರನ್ನೆಲ್ಲ ಬೆಳೆಸಿದ್ದೇನೆ ಎಂದು ಹೇಳಲ್ಲ ಬಸವಕಲ್ಯಾಣದಲ್ಲಿ 50ಸಾವಿರ ಮುಸ್ಲಿಂ ಮತಗಳಿವೆ, ಹೀಗಾಗಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದೇವೆ ಎಂದು ಗೌಡರು ಸ್ಪಷ್ಟಪಡಿಸಿದರು.
ಅದಕ್ಕೂ ಮುನ್ನ ಖೂಬಾ ಅವರಿಗೆ ಟಿಕೆಟ್ ಆಫರ್ ಮಾಡಿದ್ದೆ, ಆದರೆ ಖೂಬಾ ಪಕ್ಷೇತರ ಅಭ್ಯರ್ಥಿ ಆಗುತ್ತೇನೆ ಎಂದಿದ್ದರು. ಸಿಂಧಗಿಯಲ್ಲಿ ಮೊದಲು ಮನುಗೂಳಿಗೆ ರಾಜಕೀಯವಾಗಿ ಅವಕಾಶ ಕೊಟ್ಟಿದ್ದೆ ನಾನು ಎಂದು ವಿವರಿಸಿದ ದೇವೇಗೌಡರು, ಆದರೆ ಇವತ್ತು ಅವರ ಮಗ ಕಾಂಗ್ರೆಸ್ ಗೆ ಹೋಗಿದ್ದಾರೆ, ಮನೆ ಮಗನಂತೆ ಬೆಳಸಿಕೊಂಡು ಬಂದೆ, ಸಂಕಷ್ಟದಲ್ಲೂ ಮಂತ್ರಿ ಮಾಡಿದೆವು, ಆದ್ರೆ ಇಂದು ಕಾಂಗ್ರೆಸ್ ನ ನಾಯಕರು ಅವರ ಪುತ್ರನನ್ನು ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ನ ಮಖಂಡರು ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇರಬೇಕು, ನಾನು ಆರ್‌ಎಸ್‌ಎಸ್ ಬಗ್ಗೆ ಹೊಗಳಿದ್ದೇನೆ ಎನ್ನುವುದು ಅಪ್ಪಟ ಸುಳ್ಳು, ಆಡ್ವಾಣಿ ಬಂದಾಗ ನಾವು ಸಮಾಲೋಚನೆ ಮಾಡಿದ್ದೆವು, ಎಮರ್ಜೆನ್ಸಿ ಸಮಯದಲ್ಲಿ ಜೈಲಿಗೆ ಹೋಗಿದ್ದರ ಬಗ್ಗೆ ಮಾತನಾಡಿದ್ದೆವು ಎಂದು ಸ್ಪಷ್ಟಪಡಿಸಿದರು.




