ಲಖನ್ : ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಅಶೀಶ್ ಮಿಶ್ರಾ ಇಂದು ಕ್ರೈ ಬ್ರಾಂಚ್ ಕಚೇರಿಯ ಮುಂದೆ ಪ್ರತ್ಯಕ್ಷರಾದರು. ಲಖಿಂಪುರ್ ಖೇರಿಯಲ್ಲಿ ಸಾಕಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೀಶ್ ಮಿಶ್ರಾನಿಗೆ ವಿಚಾರಣೆಗೆ ಹಾಜರಾಗುವಂತೆ ಉತ್ತರ ಪ್ರದೇಶ ಪೊಲೀಸರು ಸಮನ್ಸ್ ಜಾರಿಮಾಡಿದ್ದರು. ಇದಲ್ಲದೆ, ಆತನ ತಂದೆಯ ಮೇಲೆ ಸಾಕಷ್ಟು ಒತ್ತಡವಿತ್ತು ಎನ್ನಲಾಗಿದೆ. ಒಂದೆಡೆ ಸುಪ್ರೀಂ ಕೋರ್ಟ್ ಬೀಸಿರುವ ಚಾಟಿ, ಮತ್ತೊಂದೆಡೆ ಬಿಜೆಪಿ ಪಕ್ಷಕ್ಕಾಗುತ್ತಿದ್ದ ಮುಜುಗರವನ್ನು ತಪ್ಪಿಸಲು ಅಶೀಶ್ ಮಿಶ್ರಾ ಇಂದು ಪೊಲೀಸರ ಮುಂದೆ ಹಾಜರಾಗಿದ್ದರು ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ರೈತರ ಮೇಲೆ ಚಲಾಯಿಸಿದ ವಾಹನ ತಮ್ಮದೇ, ಆದ್ರೆ ಈ ಸಂದರ್ಭದಲ್ಲಿ ತಾನು ಇರಲಿಲ್ಲ ಎಂದು ಅಶೀಶ್ ಮಿಶ್ರಾ ಪ್ರತಿಪಾದಿಸುತ್ತಿದ್ದರಿಂದ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಗಳಿವೆ ಎಂದುಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ಭಾನುವಾರ ನಡೆದ ಹಿಂಸಾಚಾರವು ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ನಾಲ್ವರು ರೈತರು, ಓರ್ವ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಜನರು ಮೃತಪಟ್ಟಿದ್ದರು. ಬಳಿಕ ರೈತರು ನೀಡಿರುವ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು, ಈ ಪೈಕಿ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಮತ್ತು 15-20 ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಗಲಭೆ ಇತ್ಯಾದಿಗಳನ್ನು ದಾಖಲಾಗಿತ್ತು.
ವಿವರಣೆ ಕೇಳಿದ್ದ ಸುಪ್ರೀಂ ಕೋರ್ಟ್
ಇನ್ನು ಇದೇ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರು ಮತ್ತು ಸರ್ಕಾರಕ್ಕೆ ವಿವರಣೆ ಕೇಳಿತ್ತು. ಪ್ರಕರಣ ನಡೆದು ಐದು ದಿನಗಳ ನಂತರವೂ ಆಶಿಶ್‌ನನ್ನು ಬಂಧಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಈ ಹಿಂದೆ ಯುಪಿ ಪೊಲೀಸರು ಗುರುವಾರ ನೀಡಿದ ಮೊದಲ ಸಮನ್ಸ್‌ಗೆ ಪ್ರತಿಕ್ರಿಯೆಯಾಗಿ ಆಶಿಶ್ ಮಿಶ್ರಾ ಶುಕ್ರವಾರ ಹಾಜರಾಗಲಿಲ್ಲ. ನಂತರ ಪೊಲೀಸ್ ಅಧಿಕಾರಿಗಳು ಶುಕ್ರವಾರ ಎರಡನೇ ಸಮನ್ಸ್ ನೀಡಿದ್ದರು, ಆಶಿಶ್ ಅವರನ್ನು ಲಖಿಂಪುರದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಯೊಳಗೆ ವಿಚಾರಣೆಗಾಗಿ ಅಪರಾಧ ವಿಭಾಗದ ಮುಂದೆ ಹಾಜರುಪಡಿಸುವಂತೆ ಕೇಳಿಕೊಂಡರು. ಆಶಿಶ್ ಶುಕ್ರವಾರ ಪೊಲೀಸ್ ಸಮನ್ಸ್ ಗೆ ಉತ್ತರಿಸಿ ಅವರ ತಂದೆ ಮತ್ತು ನನ್ನ ಆರೋಗ್ಯದ ಕಾರಣಗಳಿಂದ” ಪೊಲೀಸರ ವಿಚಾರಣೆಗೆ ತೆರಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಸಿಧು
ಇನ್ನು ಲಖಿಂಪುರಖೇರಿ ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟಿದ್ದಾರೆ.

ಅತ್ತ ಅಶೀಶ್ ಮಿಶ್ರಾ ಕ್ರೈ ಬ್ರಾಂಚ್ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಇತ್ತ ಲಖನೌನಲ್ಲಿ ಸಿಧು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಗಿದೆ ಎಂದು ಟ್ವೀಟ್ ಮೂಲಕ ಕಾಂಗ್ರೇಸ್ ಘಟಕ ತಿಳಿಸಿದೆ.