ನವದೆಹಲಿ: ಸುಮಾರು 90 ವರ್ಷಗಳ ಹಿಂದೆ ತಾವೇ ಆರಂಭಿಸಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನ ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಟಾಟಾ ಸಂಸ್ಥೆ ಯಶಸ್ವಿಯಾಗಿದೆ.
ಏರ್ ಇಂಡಿಯಾ ಖರೀದಿಗೆ ಟಾಟಾ ಸನ್ಸ್ ಸಂಸ್ಥೆ ಸಲ್ಲಿಸಿದ್ದ 18ಸಾವಿರ ಕೋಟಿಮೊತ್ತದ ಬಿಡ್ ಅನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಏರ್ ಇಂಡಿಯಾ ದ ಶೇಕಡಾ 100 ರಷ್ಟು ಷೇರುಗಳನ್ನು ಖರೀದಿ ಮಾಡುವಲ್ಲಿ ಟಾಟಾ ಸನ್ಸ್ ಸಂಸ್ಥೆಸ ಯಶಸ್ವಿಯಾಗಿದೆ.
ಟಾಟಾ ಸಮೂಹವು 2700ಕೋಟಿ ರೂಪಾಯಿ ನಗದು ಹಾಗೂ 15,300 ಕೋಟಿ ರೂಪಾಯಿ ಸಾಲವನ್ನು ವಹಿಸಿಕೊಳ್ಳುವ ಮೂಲಕ ಏರ್ ಇಂಡಿಯಾ ಕಂಪನಿಯನ್ನು ತನ್ನದಾಗಿಸಿಕೊಂಡಿದೆ ಎಂದು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ತಿಳಿಸುವುದರ ಮೂಲಕ ಅಧಿಕೃತವಾಗಿ ಘೋಷಣೆ ಮಾಡಿದರು.
ಇದರಿಂದ ವಿಶ್ವದ ಹಲವೆಡೆ ಇರುವ ನೂರಕ್ಕೂ ಹೆಚ್ಚು ವಿಮಾನಗಳು, ಸಾವಿರಾರು ಪೈಲಟ್ಸ್, ಸಿಬ್ಬಂದಿ, ವಿಮಾನ ನಿಲುಗಡೆ ಸ್ಥಳ, ನಿಲ್ದಾಣಗಳು ಟಾಟಾ ಸನ್ಸ್ ಸಂಸ್ಥೆಯ ಪಾಲಾಗಲಿದೆ ಎಂದು ಪಾಂಡೆ ಅವರು ತಿಳಿಸಿದರು.
ನಷ್ಠದತ್ತ ತೆರಳುತ್ತಿರುವ ಏರ್ ಇಂಡಿಯಾ ಕಂಪನಿಯನ್ನು 2017ರಲ್ಲಿಯೇ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ, ಈ ಯತ್ನ ಫಲಿಸಲಿರಲಿಲ್ಲ. 2007ರಲ್ಲಿ ಏರ್ ಇಂಡಿಯಾ ಮತ್ತು ಏರ್ ಲೈನ್ಸ್ ಕಂಪನಿಗಳನ್ನು ಕೇಂದ್ರ ಸರ್ಕಾರ ವಿಲೀನಗೊಳಿಸಿತ್ತು.
ಸ್ವಾಗತ ಕೋರಿದ ರತನ್ ಟಾಟಾ
ಏರ್ ಇಂಡಿಯಾ ಹಣಕಾಸು ಬಿಡ್‌ನಲ್ಲಿ ಗೆದ್ದಿದ್ದಕ್ಕೆ ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ಟಾಟಾ ಸಂತಸ ವ್ಯಕ್ತಪಡಿಸಿದ್ದು, ‘ವೆಲ್ ಕಂ ಬ್ಯಾಕ್ ಏರ್ ಇಂಡಿಯಾ!’ ಎಂದು ಟ್ಟೀಟ್ ಮಾಡಿ ಅವರು ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

ಸಹಜವಾಗಿಯೇ ರತನ್ ಟಾಟಾ ಅವರಿಗೆ ಇದೊಂದು ಭಾವನಾತ್ಮಕ ಕ್ಷಣ. ಯಾಕೆಂದರೆ ಅವರ ಕುಟುಂಬದ ಹಿರಿಯರಾದ, ಸ್ವತಃ ಪೈಲಟ್ ಆಗಿದ್ದ ಜೆ.ಆರ್.ಡಿ. ಟಾಟಾ ಅವರೇ ದೇಶದ ಈ ಮೊದಲ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿ, ಅದನ್ನು ದೇಶದ ಹೆಮ್ಮೆ ಎನಿಸುವಂತೆ ಕಟ್ಟಿ ಬೆಳೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಜೆ ಆರ್ ಡಿ ಟಾಟಾ ಅವರ ಫೋಟೋ ಹಾಕಿ, ಹೇಳಿಕೆ ಬಿಡುಗಡೆ ಮಾಡಿರುವ ರತನ್ ಟಾಟಾ, ‘ಇಂದು ನಮ್ಮ ಮಧ್ಯದಲ್ಲಿ ಜೆ. ಆರ್.ಡಿ. ಟಾಟಾ ಇದ್ದಿದ್ದರೆ ಬಹಳ ಸಂಭ್ರಮ ಪಡುತ್ತಿದ್ದರು’ ಎಂದು ತಿಳಿಸಿದ್ದಾರೆ.
1932ರಲ್ಲಿ ಜೆಆರ್‌ಡಿ ಟಾಟಾ ಅವರಿಂದ ಈ ಟಾಟಾ ಏರ್‌ಲೈನ್ಸ್ ಸಂಸ್ಥೆ ಆರಂಭವಾಯಿತು. ಸ್ವತಃ ಪೈಲಟ್ ಆಗಿದ್ದ ಜೆಆರ್‌ಡಿ ಟಾಟಾ ಮೊದಲ ಸೇವೆಯನ್ನು ತಾವೇ ಚಾಲನೆ ಮಾಡುವ ಮೂಲಕ ಸಂಸ್ಥೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ್ದರು. ಕರಾಚಿಯಿಂದ ಮುಂಬಯಿಗೆ ಮೊದಲ ವಿಮಾನ ಸರಕು ಸಾಗಣೆ ಹೊತ್ತು ಬರುವುದರೊಂದಿಗೆ ಟಾಟಾ ಏರ್‌ಲೈನ್ ಆರಂಭವಾಗಿತ್ತು.
ಜೆಆರ್‌ಡಿ ಟಾಟಾ ಅವರಂತೆ ರತನ್ ಟಾಟಾ ಅವರಿಗೂ ವಿಮಾನಗಳೆಂದರೆ ಅಚ್ಚು ಮೆಚ್ಚು. ಸಾಮಾನ್ಯ ವಿಮಾನಗಳಲ್ಲದೆ ಯುದ್ಧ ವಿಮಾನಗಳಲ್ಲೂ ರತನ್ ಟಾಟಾ ಅವರು ಹಾರಾಟ ನಡೆಸಿ ಖುಷಿ ಪಟ್ಟಿದ್ದರು. ಈಗಾಗಲೇ ಏರ್ ಏಷ್ಯಾ ಮತ್ತು ವಿಸ್ತಾರಾ ವಿಮಾನಯಾನ ಸಂಸ್ಥೆಗಳನ್ನು ಟಾಟಾ ಹೊಂದಿದೆ. ಆದರೆ ಏರ್ ಇಂಡಿಯಾವನ್ನು ಪಡೆದುಕೊಂಡಿರುವ ಭಾವನಾತ್ಮಕತೆ ಇದೆ ಎಂದು ತಮ್ಮ ಸಂದೇಶದಲ್ಲೂ ತಿಳಿಸಿದ್ದಾರೆ.