ಎತ್ತಿನಹೊಳೆ ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ: ಸರಕಾರದ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಸಕಲೇಶಪುರ :  ಸಾವಿರಾರು ಕೋಟಿ ರೂ.ಗಳ ವೆಚ್ಚದ ಎತ್ತಿನಹೊಳೆ ಯೋಜನೆ ತೆವಳುತ್ತಿದ್ದು, ಕಾಮಗಾರಿ ಮುಗಿದು ಬರಪೀಡಿತ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರವನ್ನು ಪ್ರಶ್ನಿಸಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿಗಳನ್ನು ವೀಕ್ಷಿಸುವ ಮುನ್ನ ಸಕಲೇಶಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “2014ರಲ್ಲಿ ಆರಂಭವಾದ ಯೋಜನೆಯನ್ನು ಮೂರೇ ವರ್ಷದಲ್ಲಿ ಮುಗಿಸಿ ಎರಡೂ ಜಿಲ್ಲೆಗಳಿಗೆ ನೀರು ಹರಿಸುವುದಾಗಿ ಹೇಳಿದ್ದ ಅಂದಿನ ಮುಖ್ಯಮಂತ್ರಿಗಳು ಈಗ ಎಲ್ಲಿದ್ದಾರೆ” ಎಂದು ಪ್ರಶ್ನಿಸಿದರು.

2014ರಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಅಡಿಗಲ್ಲು ಹಾಕಲಾಯಿತು. ಈಗ 2021. ಯೋಜನೆ ಮುಗಿಸಿ ನೀರು ಹರಿಸಲು ಇನ್ನೆಷ್ಟು ವರ್ಷ ಬೇಕು? ಮೊದಲು 8,000 ಕೋಟಿ, ನಂತರ 13,000 ಕೋಟಿಯಿಂದ ಶುರುವಾದ ಈ ಯೋಜನಾ ವೆಚ್ಚ ಈಗ 23,000 ಕೋಟಿಗೆ ಬಂದು ಮುಟ್ಟಿದ್ದು ಯಾರ ಜೇಬಿಗೆ ಎಷ್ಟು ಹಣ ತಲುಪಿದೆ ಅನ್ನೋದು ತನಿಖೆ ನಡೆಸಬೇಕಾಗಿದೆ ಎಂದರು.

ಭೂಸ್ವಾಧೀನ ಪ್ರಕಿಯೆ ವಿವಾದದಲ್ಲಿದೆ. ಈಗಾಗಲೇ ಭೂಮಿ ಕಳೆದುಕೊಂಡ ರೈತರಿಗೆ ವರ್ಷಗಳೇ ಉರುಳಿದರೂ ಪರಿಹಾರ ನೀಡಿಲ್ಲ. ಗುತ್ತಿಗೆದಾರರಿಗೆ ಹಣ ನೀಡಲು ಇರುವ ಆತುರ ರೈತರಿಗೆ ನೀಡಲು ಇಲ್ಲ. ಅದಕ್ಕೆ ದುಡ್ಡಿಲ್ಲ ಅನ್ನುತ್ತಿದೆ ಸರಕಾರ ಎಂದು ಟಿಕೀಸಿದರು.

ಎತ್ತಿನಹೊಳೆ ಅಡ್ಡಕಟ್ಟೆಗಳಿಂದ ಹರವನಹಳ್ಳಿಗೆ ನೀರು ಸಾಗಣೆ ಮಾಡುವ ಮಾರ್ಗದಲ್ಲಿನ 9 ಕಿ.ಮೀ. ಉದ್ದದ ಲೈನ್ ನಿರ್ಮಾಣ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಭೂಸ್ವಾಧೀನ ಸಮಸ್ಯೆಯಿಂದ ಅದು ವಿಳಂಬವಾಗಿದ್ದು, ಅದನ್ನು ಕ್ಲಿಯರ್ ಮಾಡುವ ಕೆಲಸವನ್ನು ಸರಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕೇವಲ ಲೈನ್ ಅಂದಾಜು ಮಾಡಿ ಕಾಮಗಾರಿ

ಯಾವುದೇ ಯೋಜನೆ ಕಾರ್ಯಗತ ಮಾಡಬೇಕಾದರೆ, DPR (ಸಮಗ್ರ ಯೋಜನಾ ವರದಿ) ತಯಾರಿಸಿಯೇ ಮಾಡಬೇಕು. ಆದರೆ, ಎತ್ತಿನಹೊಳೆ ಬಗ್ಗೆ ಹಾಗೆ ಮಾಡದೇ ಕೇವಲ ಲೈನ್ ಅಂದಾಜು ಮಾಡಿ ಕಾಮಗಾರಿ ಮಾಡಲಾಗುತ್ತಿದೆ. ನಿರಂತರವಾಗಿ ಯೋಜನಾ ವೆಚ್ಚವನ್ನು ಮನಸೋ ಇಚ್ಛೆ ಹಿಗ್ಗಿಸಲಾಗುತ್ತಿದೆ. ಮುಂದೊಂದು ದಿನ ಇದೇ ದೊಡ್ಡ ಕರ್ಮಕಾಂಡ ಆಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಈಗಾಗಲೇ 9,000 ಕೋಟಿಗೂ ಹೆಚ್ಚು ಹಣ ವೆಚ್ಚವಾಗಿದೆ ಎಂದು ಸರಕಾರವೇ ಹೇಳಿಕೊಂಡಿದೆ.  ಆದರೆ, ಭೂಮಿ ಕಳೆದುಕೊಂಡವರ ಬಗ್ಗೆ ಈ ನಿರ್ಲಕ್ಯ ಏಕೆ? ಗುತ್ತಿಗೆದಾರರ ಮೇಲೆ ಇರುವಷ್ಟು ಪ್ರೀತಿ ರೈತರ ಮೇಲೆ ಏಕಿಲ್ಲ? ಗುತ್ತಿಗೆದಾರರ ಕಣ್ಣಿಗೆ ಬೆಣ್ಣೆ, ರೈತರ ಕಣ್ಣಿಗೆ ಸುಣ್ಣ ಏಕೆ? ಎಂದರು.

ವಿರೋಧವಿಲ್ಲ, ಆದರೆ ನೀರು ಹರಿಯಲೇಬೇಕು

ಯೋಜನೆಯನ್ನು ಆರಂಭ ಮಾಡಿದಾಗ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ತಲಾ 5 ಟಿಎಂಸಿ ನೀರು ಹರಿಸುವುದಾಗಿ ಅಂದಿನ ಕಾಂಗ್ರೆಸ್ ಸರಕಾರ ಹೇಳಿತ್ತು. ಅದರಂತೆ ನೀರು ಹರಿಸಲೇಬೇಕು. ನೀರಾವರಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಕೋಲಾರ ಜಿಲ್ಲೆಯ ಕಟ್ಟ ಕಡೆಯ ಜಾಗಕ್ಕೂ ನೀರು ಹರಿಯಬೇಕು. ಇಲ್ಲವಾದರೆ, ನಾವು ಸುಮ್ಮನಿರುವುದಿಲ್ಲ ಎಂದು ಆಗ್ರಹ ಮಾಡಿದರು.

ತುಮಕೂರಿನಿಂದ ಕೋಲಾರದವರೆಗೆ ಯೋಜನೆ ವ್ಯಾಪ್ತಿಗೆ ತಂದಿರುವ ಜಿಲ್ಲೆಗಳ ಒಟ್ಟು 170 ಕೆರೆಗಳನ್ನು ತುಂಬಿಸುವುದು ಸೇರಿ ಎಲ್ಲ ಭಾಗಗಳಿಗೆ ಕುಡಿಯುವ ನೀರೊದಗಿಸುವ ವಿಚಾರದಲ್ಲಿ ನಾವು ರಾಜಿ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನೋಡೆಲ್ ಅಧಿಕಾರಿ ನೇಮಿಸಿ

ಎತ್ತಿನಹೊಳೆ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಮರ್ಥ ಆಧಿಕಾರಿಯೊಬ್ಬರನ್ನು ನೋಡೆಲ್ ಆಫಿಸರ್ ಆಗಿ ನೇಮಕ ಮಾಡುವಂತೆ ಮಾಜಿ ಮುಖ್ಯಮಂತ್ರಿಗಳು ಸರಕಾರಕ್ಕೆ ಸಲಹೆ ನೀಡಿದರು.

ಶಾಸಕ ಶ್ರೀನಿವಾಸ ಗೌಡರಿಗೆ ಬಿಸಿ ಮುಟ್ಟಿಸಿದ ಹೆಚ್ಡಿಕೆ

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರು ಇನ್ನೆಷ್ಟು ದಿನ ಕೊಳಚೆ ನೀರು ಕುಡಿಯಬೇಕು? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಎತ್ತಿನಹೊಳೆ ಯೋಜನೆ ಟೇಕಾಫ್ ಆಗಿ 8-9 ವರ್ಷವಾಗಿದೆ. ದಶಮಾನೋತ್ಸವ ಹತ್ತಿರದಲ್ಲೇ ಇದೆ. ಕೆಸಿ ವ್ಯಾಲಿ, ಹೆಚ್.ಎನ್.ವ್ಯಾಲಿ ನೀರಿನ ಅಪಾಯ ಹೇಗಿರುತ್ತದೆ ಎಂಬುದು ಮುಂದೆ ಗೊತ್ತಾಗುತ್ತದೆ ಎಚ್ಚರಿಸಿದರು.

ಬೆಂಗಳೂರು ನೀರು ಕೊಟ್ಟೆವು ಎಂದು ಉದ್ದುದ್ದ ಭಾಷಣ ಮಾಡುತ್ತಾರೆ. ನಮ್ಮ ಪಕ್ಷದಿಂದಲೇ ಗೆದ್ದವರೊಬ್ಬರು ಕುಮಾರಸ್ವಾಮಿ ಅವರು ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಾರೆ ಎಂದು ಹೇಳಿದ್ದಾರೆ. ಅವರ ಮನೆಗೆ ಕೆಸಿ ವ್ಯಾಲಿ ಮೂಲಕ ಬಂದು ಕೆರೆಗಳಿಗೆ ಬಂದು ತುಂಬುವ ನೀರನ್ನು ಕಳಿಸುವುದು ಒಳ್ಳೆಯದು. ಅದನ್ನು ಅವರು ಬಳಸಿ ನೋಡಬೇಕು ಎಂದು ಪರೋಕ್ಷವಾಗಿ ಕೋಲಾರ ಶಾಸಕ ಶ್ರೀನಿವಾಸ ಗೌಡರಿಗೆ ಹೆಚ್ಡಿಕೆ ಬಿಸಿ ಮುಟ್ಟಿಸಿದರು.

ನೀರಿನ ವಿಷಯದಲ್ಲಿ ನಾನು ಲಘುವಾಗಿ ಮಾತನಾಡಲ್ಲ. ಜನರ ಜೀವ ಮುಖ್ಯ. ಅವರ ಬದುಕಿನ ಜತೆ ಚೆಲ್ಲಾಟ ಆಡೋದು ಬೇಡ. ಚಿಲ್ಲರೆ ರಾಜಕಾರಣ ಮಾಡುವುದು ನನ್ನ ಜಾಯಮಾನವಲ್ಲ ಎಂದು ಅವರು ಕುಟುಕಿದರು.

More News

You cannot copy content of this page