ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆ ಕಡಿತಗೊಂಡಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಅಧಿಕಾವಧಿಯಲ್ಲಿ ವಿದ್ಯುತ್ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚಾಗಿ, ಅದನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದ್ದೆವು ಎಂದು ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ನನಗೆ ಬಂದಿರುವ ಮಾಹಿತಿ ಪ್ರಕಾರ ಒಂದೇ ಒಂದು ದಿನಕ್ಕೆ ಬೇಕಾಗಿರುವಷ್ಟು ಮಾತ್ರ ಕಲ್ಲಿದ್ದಲು ಇದೆ. ಇದು ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯ. ಕಲ್ಲಿದ್ದಲು ಕೊರತೆಗೆ ಬೇರೆ ಕಾರಣವೇನಾದರೂ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ ಎಂದು ಬಿಂಬಿಸಿದರೆ ಬಂಡವಾಳ ಹೂಡಿಕೆದಾರರು ಬರಲು ಹಿಂಜರಿಯುತ್ತಾರೆ ಎಂದು ತಿಳಿಸಿದರು.
ಪರಿಹಾರ ನೀಡದ ಸರ್ಕಾರ
ಈ ಸರ್ಕಾರ ಸತ್ತವರಿಗೇ ಪರಿಹಾರ ನೀಡಿಲ್ಲ. ಇನ್ನು ಮಳೆ ಸಂತ್ರಸ್ತರಿಗೆ ಕೊಡುತ್ತಾರೆಯೇ? ಎಂದು ಪ್ರಶ್ನಿಸಿದ ಶಿವಕುಮಾರ್, ಈ ಸರಕಾರಕ್ಕೆ ಬಡವರಿಗೆ ನೆರವಾಗುವ ಅನುಭವವಾಗಲಿ, ಮನಸ್ಥಿತಿಯಾಗಲಿ ಇಲ್ಲ. ರೈತರ ಬಗ್ಗೆ ಕಾಳಜಿಯಂತೂ ಮೊದಲೇ ಇಲ್ಲ ಎಂದು ಆರೋಪಿಸಿದರು.
ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣ
ಸಿದ್ದರಾಮಯ್ಯ ಅವರು ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ಹೋಗುವ ವಿಚಾರವಾಗಿ ನಮ್ಮ ಬಳಿ ಯಾವುದೇ ಚರ್ಚೆ ಆಗಿಲ್ಲ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು,ಅದು ಕೇವಲ ಊಹಾಪೋಹ ಮಾತ್ರ. ಈ ವಿಚಾರವಾಗಿ ಪಕ್ಷ ಉಂಟು, ನಮ್ಮ ಶಾಸಕಾಂಗ ಪಕ್ಷದ ನಾಯಕರು ಉಂಟು. ನಾವು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ರಾಹುಲ್ ಗಾಂಧಿ ಅವರೇ ಜವಾಬ್ದಾರಿ ವಹಿಸಿಕೊಳ್ಳಬೇಕು
ಇಡೀ ದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಅವರೇ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಈಗ ರಾಹುಲ್ ಗಾಂಧಿ ಅವರೇ ಕೆಲಸ ಮಾಡುತ್ತಿದ್ದು, ಅವರ ಮುಂದಾಳತ್ವ ಪಕ್ಷಕ್ಕೆ ಬೇಕು ಎಂಬುದು ಇಡೀ ಕಾಂಗ್ರೆಸ್ ಕಾರ್ಯಕರ್ತರ ಅಪೇಕ್ಷೆ. ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವಿಚಾರವಾಗಿ ಕೆಲವೊಂದು ಪ್ರಕ್ರಿಯೆಗಳಿವೆ. ಆ ಮೂಲಕ ಆಯ್ಕೆ ನಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಉಪಚುನಾವಣೆ
ಉಪಚುನಾವಣೆಯಲ್ಲಿ ಬಿಜೆಪಿ ಅವರು ತಮ್ಮ ಬಂಡಾಯ ಅಭ್ಯರ್ಥಿಯನ್ನು ಸ್ಪರ್ಧೆಯಿಂದ ಹಿಂದೆ ಸರಿಸಿರುವುದು ಅವರ ತಂತ್ರಗಾರಿಕೆ. ಅವರ ರಾಜಕೀಯ ತಂತ್ರಗಾರಿಕೆ ಅವರು ಮಾಡಿಕೊಳ್ಳಲಿ. ಅವರು ಯಾರನ್ನಾದರೂ ಅಭ್ಯರ್ಥಿ ಮಾಡಲಿ. ಯಾರ ಮನಸ್ಸಾದರೂ ಓಲೈಸಲಿ. ಅದಕ್ಕೂ ನಮಗೂ ಸಂಬಂಧವಿಲ್ಲ. ಅವರ ಪಕ್ಷ ರಾಜಕಾರಣದ ಗೊಡವೆ ನಮಗೆ ಬೇಡ ಎಂದು ಶಿವಕುಮಾರ್ ತಿಳಿಸಿದರು.