ಬಿಡದಿ : ಸಿದ್ದರಾಮಯ್ಯನವರೇ ಇಷ್ಟು ದಿನ ನನ್ನ ಬಗ್ಗೆ ಮತ್ತು ನನ್ನ ಪಕ್ಷದ ಬಗ್ಗೆ ಮಾತನಾಡಿದ್ದು ಸಾಕು. ಎಲ್ಲವನ್ನೂ ಇಲ್ಲಿಗೆ ನಿಲ್ಲಿಸಿ. ನೀವು ನಿಲ್ಲಿಸದಿದ್ದರೆ ನಾನೂ ಮಾತನಾಡುವುದನ್ನು ಮುಂದುವರೆಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ನೇರವಾಗಿ ವಾರ್ನಿಂಗ್ ನೀಡಿದರು.
ಬಿಡದಿ ತೋಟದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮೊದಲು ನಮ್ಮ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಆಮೇಲೆ ನಾನು ಮಾತನಾಡುವುದನ್ನು ನಿಲ್ಲಿಸುತ್ತೇನೆ ಎಂದರಲ್ಲದೆ, ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿಶ್ವಾಸಕ್ಕೆ ಅರ್ಹವಲ್ಲದ ವ್ಯಕ್ತಿ. ಅವರು ನಮ್ಮ ಪಕ್ಷದ ವಿರುದ್ಧ ಸರಣಿ ಹೇಳಿಕೆಗಳನ್ನು ನೀಡುತ್ತಿರುವುದು ಒಂದೆಡೆ ಆಗುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಪಕ್ಷವನ್ನು ಕುತಂತ್ರದಿಂದ ಅವರೇ ಮತ್ತಷ್ಟು ಮುಳುಗಿಸುತ್ತಿದ್ದಾರೆ, ನನ್ನ ನೇತೃತ್ವದ ಸಮ್ಮಿಶ್ರ ಸರಕಾರ ಬೀಳಲು ನೇರ ಕಾರಣ ಸಿದ್ದರಾಮಯ್ಯ ಅವರೇ. ಅವರೇ ಶಾಸಕರನ್ನು ಬಿಜೆಪಿಗೆ ಕಳಿಸಿದ್ದು ಎಂದು ಆರೋಪಿಸಿದರು.
ಸಮ್ಮಿಶ್ರ ಸರಕಾರ ಬಂದ ಒಂದೇ ತಿಂಗಳಲ್ಲಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ಕೂತುಕೊಂಡು ಸಿದ್ದ ಸೂತ್ರ ರೂಪಿಸಿದ್ದು ಯಾರು? ತಮ್ಮ ಬೆಂಬಲಿಗರನ್ನು ಅಲ್ಲಿಗೆ ಕರೆಸಿಕೊಂಡು ಇನ್ನೊಂದು ವರ್ಷ ಈ ಸರಕಾರ ಇರುತ್ತೆ, ಆಮೇಲೆ ನೋಡೋಣ ಅಂದಿದ್ದು ಯಾರು? ಅಂದು ವಿಡಿಯೋ ವೈರಲ್ ಆಗಿತ್ತಲ್ಲ ಸಿದ್ದರಾಮಯ್ಯನವರೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ನಿಮ್ಮ ಶಾಸಕರ ವಿಚಾರಲ್ಲಿ ನಾನು ಯಾವ ರೀತಿ ನಡೆದುಕೊಂಡೆ ಎಂಬುದು ನನಗೆ ಮಾತ್ರ ಗೊತ್ತು. ನೀವು ಅಧಿಕಾರದಿಂದ ಕೆಳಗಿಳಿದ ನಂತರವೂ ನನಗೆ ನೀವು ಅಧಿಕೃತ ನಿವಾಸ ಬಿಟ್ಟುಕೊಡಲಿಲ್ಲ. ಜೆ ಪಿ ನಗರದಿಂದ ದಿನವೂ ನಾನು ಓಡಾಡುವುದು ತೊಂದರೆ ಆಗುತ್ತಿತ್ತು. ಆ ಕಾರಣಕ್ಕೆ ನಾನು ವೆಸ್ಟ್ ಎಂಡ್ ಹೋಟೆಲ್ ಗೆ ಮಧ್ಯಾಹ್ನದ ಊಟಕ್ಕೆ ಹೋಗಬೇಕಾಯಿತು. ಅಲ್ಲಿ ನಾನು ಮೋಜು ಮಸ್ತಿ ಮಾಡಲು ಹೋಗಲಿಲ್ಲ. ಬೆಳಗ್ಗೆ 9 ಗಂಟೆಗೆ ಕೆಲಸ ಶುರು ಮಾಡಿದರೆ ರಾತ್ರಿ 12 ಗಂಟೆವರೆಗೂ ಕೃಷ್ಣ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆ ಮಾಡುತ್ತಿದ್ದೆ. ಎಲ್ಲಕ್ಕೂ ದಾಖಲೆ ಇದೆ, ಪರಿಶೀಲನೆ ಮಾಡಿಕೊಳ್ಳಿ ಎಂದು ಹೇಳಿದರು.
ನೀವೆಲ್ಲ ಸೇರಿ ಸರಕಾರವನ್ನು ಕೆಡವಲು ಸ್ಕೆಚ್ ಹಾಕಿದಾಗ ನಾನು ಅಮೆರಿಕದಲ್ಲಿ ಇದ್ದೆ, ನಿಜ. ಅಂದು ಆದಿಚನಗಿರಿ ಶ್ರೀಗಳು ಅಮೆರಿಕದಲ್ಲಿ ಶ್ರೀ ಕಾಲಭೈರವೇಶ್ವರ ದೇಗುಲ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆಗ ಸ್ವಾಮೀಜಿ ಅವರು ಕರೆದ ಕಾರಣ ನಾನು ಅಮೆರಿಕಕ್ಕೆ ಹೋಗಬೇಕಾಯಿತು ಎಂದು ಸಮಜಾಯಿಸಿ ನೀಡಿದ್ದಾರೆ.
ನಿಮ್ಮ ಶಾಸಕರು ನನ್ನ ಬಳಿ ಬಂದು ಪತ್ರಗಳನ್ನು ಹೇಗೆ ಕೊಡುತ್ತಿದ್ದರು ಎನ್ನುವ ಮಾಹಿತಿ ಎಲ್ಲರಿಗೂ ಗೊತ್ತಿದೆ. ಒಬ್ಬ ಮುಖ್ಯಮಂತ್ರಿ ಮುಂದೆ ಮನವಿ ಪತ್ರಗಳನ್ನು ಬಿಸಾಡುತ್ತಿದ್ದರು. ಅದಕ್ಕೆಲ್ಲಾ ಕುಮ್ಮಕು ನೀಡಿದ್ದು ಯಾರು? ಎಂದು ಪ್ರಶ್ನಿಸಿದ್ದಾರಲ್ಲದೆ, ಎಂಟಿಬಿ ನಾಗರಾಜು ಹೇಳ್ತಾ ಇದ್ರು. ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು. ಅಂತ ವ್ಯಕ್ತಿ ಬಿಜೆಪಿಗೆ ಹೋಗಿದ್ದು ಹೇಗೆ? ನಿಮಗೆ ಏನೂ ಗೊತ್ತಿಲ್ಲವೆ ಸಿದ್ದರಾಮಯ್ಯನವರೆ ಎಂದಿದ್ದಾರೆ.
ನೀವೆಲ್ಲಾ ಮಾಡಿದ ಹುನ್ನಾರಕ್ಕೆ ಸರ್ಕಾರ ಪತನವಾಯಿತು. ಬಡವರಿಗೆ ಸುಲುಭವಾಗಿ ನಾನು ಸಿಎಂ ಆಗಿ ಎಲ್ಲರಿಗೂ ಸಿಗುತ್ತಿದ್ದೆ. ಆದರೆ, ನೀವು ಸಿಎಂ ಆಗಿದ್ದಾಗ ಸಂಜೆ 6 ಗಂಟೆ ಮೇಲೆ ಸಿಕ್ತಾ ಇರಲಿಲ್ಲ. ಎಲ್ಲಿ ಹೋಗ್ತಾ ಇದ್ರಿ ಸಿದ್ದರಾಮಯ್ಯನವರೇ. ಗಢತ್ತಾಗಿ ಊಟ ಮಾಡಿ ನಿದ್ದೆ ಮಾಡ್ಕೊಂಡು ಇರ್ತಿದ್ರಾ, ಹೇಗೆ ಎಂದಿದ್ದಾರೆ.
ರಮೇಶ್ ಜಾರಕಿಹೊಳಿಗೂ ನನಗೂ ಭಿನ್ನಮತ ಇತ್ತಾ? ಅದು ನಿಮ್ಮ ಪಕ್ಷದಲ್ಲಿ ಶುರುವಾದ ಸಮಸ್ಯೆ. ಒಮ್ಮೆ ಶಾಸಕಾಂಗ ಪಕ್ಷ ಸಭೆ ಕರೆದು ಸರಿ ಮಾಡಬಹುದಿತ್ತು. ಹಾಗೆ ನೀವು ಮಾಡಲಿಲ್ಲ. ಸಮನ್ವಯ ಸಮತಿ ಅಧ್ಯಕ್ಷರಾಗಿ ನೀವು ಮಾಡಿದ್ದೇನು ಎಂದುಪ್ರಶ್ನಿಸಿದ್ದಾರೆ.
ನಮ್ಮ ಪಕ್ಷದ ಕೋಟದಲ್ಲೆ ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದು ನಾನು ಹೇಳಿದಾಗ ನೀವು ಮಾಡಿದ್ದೇನು ಎನ್ನುವುದು ಗೊತ್ತಿದೆ. ಅವರಿಬ್ಬರಿಗೆ ಅಡ್ಡಿ ಮಾಡಿದವರು ಯಾರು ಎಂದರಲ್ಲದೆ, ಧರ್ಮಸಿಂಗ್ ಅವರ ಸರಕಾರ ಬೀಳಲು ಕಾರಣ ಯಾರು? ಆ ಸರಕಾರದಲ್ಲಿ ಡಿಸಿಎಂ ಆಗಿದ್ದುಕೊಂಡು ರಾಜಕೀಯ ಬದುಕು ಕೊಟ್ಟ ಮಾತೃಪಕ್ಷಕ್ಕೆ ಹಳ್ಳ ಅಗೆಯುವುದು ಎಷ್ಟು ಸರಿ. ಆಗ ನನಗೆ ಪಕ್ಷ ಉಳಿಸುವುದು ಮುಖ್ಯವಾಗಿತ್ತು. ನಿಮ್ಮ ನಡವಳಿಕೆಯಿಂದಲೆ ಆ ಸರ್ಕಾರ ಹೋಯ್ತು ಸಿದ್ದರಾಮಯ್ಯನವರೇ ಎಂದು ಟಿಕೀಸಿದ್ದಾರೆ.

ಜನತಾ ಪಕ್ಷದಲ್ಲಿ ಇದ್ದಾಗ ನಾನು ಅನೇಕರಿಗೆ ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೆ. ಸಿದ್ದರಾಮಯ್ಯನವರೆ, ನೀವೇ ಜಾತ್ಯಾತೀತ ಜನತಾದಳ ಅಧ್ಯಕ್ಷರಾಗಿದ್ದಿರಿ. 1999 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೀವು ಸೋತು ಅನುಗ್ರಹಕ್ಕೆ ಬಂದು ಕಣ್ಣೀರು ಹಾಕಿದ್ದು ನೀವು ಮರೆತಿರಾ? ಆಗ ನಿಮಗೆ ದೇವೆಗೌಡರು ಧೈರ್ಯ ತುಂಬಿದ್ದು ಮರೆತಿದ್ದೀರಾ ಎಂದರು
ಜೆಡಿಎಸ್ ಮುಗಿಸಲು ಸಮಾವೇಶಗಳನ್ನು ಮಾಡಿದಂತೆ ಈಗ ಕಾಂಗ್ರೆಸ್ ಮುಗಿಸಲು ಈಗ ಅದೇ ಕುತಂತ್ರ ಮಾಡುತ್ತಿದ್ದೀರಿ. ಜಾತಿಗಣತಿ ವಿಚಾರದಲ್ಲಿ ನನ್ನನ್ನು ಡಬಲ್ ಗೇಮ್ ಅಂತೀರಾ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಬೆಂಕಿ ಇಡಲು ಹೊರಟಿದ್ದೀರಿ ಎಂದು ಆರೋಪಿಸಿದರು. ಮಂಡ್ಯದಲ್ಲಿ ಜೆಡಿಎಸ್ ವೀಕ್ ಎಂಬ ಹೇಳಿಕೆ ನೀಡಿದ್ದಿರಿ. ಮಂಡ್ಯದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿದ್ದಾರೆ. ಮುಂದೆ ನಮ್ಮನ್ನು ಕೆಣಕಬೇಡಿ. ನನ್ನ ಪಾಡಿಗೆ ನಾನು ಇರ್ತಿನಿ. ನನ್ನ ತಂಟೆಗೆ ಬರಬೇಡಿ.
ಕಾಂಗ್ರೆಸ್ ನಾಯಕರಿಗೆ ಹೇಳ್ತಾ ಇದ್ದೀನಿ. ನಿಮ್ಮ ಪಕ್ಷ ಮುಗಿಸೋಕೆ ಸಿದ್ದರಾಮಯ್ಯ ಒಬಿಸಿ ಸಮಾವೇಶ ಮಾಡ್ತಾ ಇದ್ದಾರೆ. ಬಿಎಸ್ವೈ ಸಿಎಂ ಆಗಿದ್ದಾಗ ನಾನು ಒಂದೇ ಬಾರಿ ಭೇಟಿ ಮಾಡಿದ್ದು ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ಯಡಿಯೂರಪ್ಪ ಹತ್ತಿರ ಹೋಗಿ ಯಾರ ಕೈಲಿ ದುಡ್ಡು ಇಸ್ಕೊಂಡು ಬಂದ್ರಿ ಸಿದ್ದರಾಮಯ್ಯ. ಎಲ್ಲಾ ವಿಚಾರವೂ ಗೊತ್ತಿದೆ. ಇದು ನಾನು ಹೇಳ್ತಿಲ್ಲ. ನಿಮ್ಮ ಪಕ್ಕದಲ್ಲಿ ಇದ್ದವ್ರೆ ಹೇಳಿರುವ ಮಾತು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.