ಕಾರವಾರ : ಪೆಟ್ರೋಲ್ ಕೆಮಿಕಲ್ ತುಂಬಿಕೊಂಡು ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಪಲ್ಟಿಯಾಗಿದ್ದರಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಲಾರಿಗೆ ಮತ್ತು ರಸ್ತೆ ಪಕ್ಕದಲ್ಲಿಯೇ ಇದ್ದ ಕಾಡಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಸ್ಥಳೀಯರಲ್ಲಿ ಮತ್ತುಷ್ಟು ಆತಂಕ ಹೆಚ್ಚಾಗಿತ್ತು. ಅಗ್ನಿಶಾಮಕ ದಳದ ಹರಸಾಹಸದಿಂದ ಭಾರೀ ದುರಂತ ತಪ್ಪಿದಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ 63ರ ಆರ್ತಿಬೈಲ್ ಕ್ರಾಸ್‌ನ ಇಡಗುಂದಿ ಸಮೀಪ ಇಂದು ಬೆಳ್ಳಂಬೆಳಗ್ಗೆ ಈ ಘಟನೆ ಸಂಭವಿಸಿದೆ. ಮಂಗಳೂರಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಓಎನ್ ಜಿಸಿ) ಪೆಟ್ರೋಕೆಮಿಕಲ್ಸ್ ವಿಭಾಗದಿಂದ ಬೆಂಜಿನ್ ಪೆಟ್ರೋಕೆಮಿಕಲ್ ಅನ್ನು ತುಂಬಿಕೊಂಡು ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಟ್ಯಾಂಕರ್ ತೆರಳುತ್ತಿತ್ತು.

ಬೆಂಜಿನ್ ನಲ್ಲಿ ಗ್ಯಾಸೋಲಿನ್ (ಪೆಟ್ರೋಲ್) ಅನ್ನು ಒಳಗೊಂಡಿರುವ ಕಾರಣ ಟ್ಯಾಂಕರ್ ಪಲ್ಟಿಯಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಟ್ಯಾಂಕರ್ ಪಲ್ಟಿಯಾದ ತಕ್ಷಣ ಚಾಲಕ ಮತ್ತು ಕ್ಲೀನರ್ ಟ್ಯಾಂಕರ್ ನಿಂದ ಹೊರ ಬಂದು ಜೀವ ಉಳಿಸಿಕೊಂಡಿದ್ದಾರೆ.
ಕೆಲ ಹೊತ್ತಿನ ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಪೊಲೀಸರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಅಷ್ಟರಲ್ಲೇ ಟ್ಯಾಂಕರ್ ಬಹುತೇಕ ಬೆಂಕಿಗಾಹುತಿಯಾಗಿತ್ತು. ಈ ಅಗ್ನಿ ಅವಘಡದಿಂದ ಕಿಲೋ ಮೀಟರ್‌ಗಟ್ಟಲೇ ವಾಹನಗಳು ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿದ್ದವು. ಅಲ್ಲದೇ ಘಟ್ಟದಲ್ಲಿ ಟ್ಯಾಂಕರ್‌ಗೆ ಬೆಂಕಿ ತಗುಲಿದ್ದರಿಂದ ಆತಂಕದ ವಾತಾವರಣ ಸಹ ನಿರ್ಮಾಣವಾಗಿತ್ತು.

ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಟ್ಯಾಂಕರ್‌ನಲ್ಲಿದ್ದ ಬೆಂಜಿನ್ ಹೆದ್ದಾರಿ ಪಕ್ಕದ ಅರಣ್ಯ ಪ್ರದೇಶಕ್ಕೆ ಚಿಮ್ಮಿದೆ. ಹೀಗಾಗಿ ಅರಣ್ಯಕ್ಕೂ ಬೆಂಕಿ ವ್ಯಾಪಿಸಿಕೊಂಡಿತ್ತು. ಈ ಪ್ರದೇಶದಲ್ಲಿ ಜನವಸತಿ ಕಡಿಮೆ ಇರುವ ಕಾರಣ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ. ಆದರೂ ಈ ಘಟನೆ ಹೆದ್ದಾರಿಯಲ್ಲಿ ಸಾಗುತ್ತಿದ್ದವರ ಆತಂಕಕ್ಕೆ ಕಾರಣವಾಯಿತು.
ಇನ್ನೂ ಕಣ್ಮುಂದಿದೆ ಬರ್ಗಿಯ ದುರಂತ
ಕಳೆದ ಆರು ವರ್ಷದ ಹಿಂದೆ ಕುಮಟಾದ ಬರ್ಗಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಹೆದ್ದಾರಿ ಸಮೀಪದ ಮನೆಗಳ ಮೇಲೆ ಬಿದ್ದು ಸ್ಫೋಟಗೊಂಡಿತ್ತು. ಮನೆಗಳು ಸಂಪೂರ್ಣ ಹೊತ್ತಿ ಉರಿದು 13 ಜನ ಸಾವನ್ನಪ್ಪಿದ್ದರು. ಹೀಗಾಗಿ ಪ್ರತಿ ಸಾರಿ ಜಿಲ್ಲೆಯ ಎಲ್ಲೇ ಟ್ಯಾಂಕರ್ ಪಲ್ಟಿಯಾದರೂ ಈ ಬರ್ಗಿಯ ದುರಂತ ಜನರಿಗೆ ಒಮ್ಮೆ ಈ ಘಟನೆ ಕಣ್ಮುಂದೆ ಹಾದು ಹೋಗುತ್ತದೆ.
ಕುಮಟಾದ ಬರ್ಗಿ ಸಮೀಪದ ನಡೆದಿದ್ದ ಈ ಗ್ಯಾಸ್ ಟ್ಯಾಂಕರ್ ದುರಂತದ ಬಳಿಕ ರಾತ್ರಿ 11ರಿಂದ ಬೆಳಗಿನ ಜಾವ 5ರ ಅವಧಿಯಲ್ಲಿ ಗ್ಯಾಸ್ ಟ್ಯಾಂಕರ್‌ಗಳ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ ಇದರ ಪಾಲನೆ ಸರಿಯಾಗಿ ಆಗುತ್ತಿಲ್ಲ ಎನ್ನಲಾಗಿದೆ.