ನವದೆಹಲಿ : ಮಾಜಿ ಪ್ರಧಾನಮಂತ್ರಿ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಡಾ. ಮನಮೋಹನ್ ಸಿಂಗ್ ಅವರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
89 ವರ್ಷದ ಮನಮೋಹನ್ ಸಿಂಗ್ ಅವರು ಜ್ವರ ಮತ್ತು ನಿಶ್ಯಕ್ತಿಯಿಂದ ಬಳಲುತ್ತಿದ್ದರು, ಜ್ವರದಿಂದ ಚೇತರಿಸಿಕೊಂಡಿರುವ ಅವರಿಗೆ ತೀವ್ರತರದ ಸುಸ್ತು ಕಾಣಿಸಿಕೊಂಡಿದ್ದರಿಂದ ಮತ್ತೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಎಐಸಿಸಿ ಕಾರ್ಯದರ್ಶಿ ಪ್ರಣವ್ ಝಾ ಈ ಕುರಿತು ಮಾಹಿತಿ ನೀಡಿದ್ದು, ಅವರ ಆರೋಗ್ಯ ಸ್ಥಿರವಾಗಿದ್ದು, ಸಾಮಾನ್ಯ ಚಿಕಿತ್ಸೆಗಾಗಿ ಅವರು ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಮನಮೋಹನ್ ಸಿಂಗ್ ಅವರ ಆರೋಗ್ಯದ ಬಗ್ಗೆ ಕೆಲವು ವದಂತಿಗಳು ಕೇಳಿ ಬರುತ್ತಿವೆ. ಅವರ ಆರೋಗ್ಯ ಸ್ಥಿರವಾಗಿವೆ. ಯಾವುದಾದರೂ ಮಾಹಿತಿ ಇದ್ದರೆ ನಾವು ಹಂಚಿಕೊಳ್ಳುತ್ತೇವೆ. ಮಾಧ್ಯಮದ ಸ್ನೇಹಿತರ ಕಾಳಜಿಗೆ ಧನ್ಯವಾದಗಳು ಎಂದು ಪ್ರಣವ್ ಝಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2009ರಲ್ಲಿ ಅವರಿಗೆ ಬೈಪಾಸ್ ಸರ್ಜರಿ ನಡೆದಿತ್ತು. ಕಳೆದ ವರ್ಷದ ಮೇ ತಿಂಗಳಿನಲ್ಲಿಯೂ ಎದೆ ನೋವಿನ ಕಾರಣ ಅವರು ಏಮ್ಸ್‌ಗೆ ದಾಖಲಾಗಿದ್ದರು. ಕೋವಿಡ್ ಸೋಂಕು ತಗುಲಿದ್ದರಿಂದ ಈ ವರ್ಷದ ಏಪ್ರಿಲ್ 19ರಂದು ಡಾ. ಮನಮೋಹನ್ ಸಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಏಪ್ರಿಲ್ 29ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ ಪ್ರಧಾನಿ ಮೋದಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಶೀಘ್ರಗತಿಯಲ್ಲಿ ಗುಣಮುಖರಾಗಿ ಉತ್ತಮ ಆರೋಗ್ಯ ಹೊಂದಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ ಟ್ವೀಟ್ ಮಾಡುವುದರ ಮೂಲಕ ಶುಭ ಹಾರೈಸಿದ್ದಾರೆ.




