ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೆ, ವಿನಹ ಡಿಕೆಶಿಯವರ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ, ಆರೋಪಿಸಿಲ್ಲ, ಪರ್ಸೆಂಟೇಜ್ ವಿಚಾರ ಬಿಜೆಪಿ ಬಗ್ಗೆ ಮಾತನಾಡಿದ್ದೇ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆಯ ಘಟನೆ ನನಗೆ ತುಂಬಾ ನೋವುಂಟು ಮಾಡಿದೆ, ನನ್ನನ್ನು ಈಗಾಗಲೇ ಪಕ್ಷದಿಂದ ಉಚ್ಛಾಟಿಸಲಾಗಿದೆ, ಆದ್ರೆ ನನಗೆ ಉಚ್ಛಾಟನೆಯಿಂದ ನೋವಾಗಿಲ್ಲ, ಈ ಘಟನೆಯಿಂದ ತುಂಬಾ ನೋವಾಗಿದೆ ಎಂದು ಹತಾಶಾ ನುಡಿಗಳನ್ನಾಡಿದರು.
ಹಲವು ವರ್ಷಗಳಿಂದ ಪಕ್ಷದಲ್ಲಿದ್ದೇನೆ, ಡಿಕೆಶಿ ನಮ್ಮ ದೇವರಿದ್ದಂತೆ, ಕೆಟ್ಟ ಘಳಿಗೆಯಲ್ಲಿ ಇಂತದ್ದೊಂದು ಸನ್ನಿವೇಶ ನಡೆದಿದೆ, ಇದರಿಂದ ಪಕ್ಷಕ್ಕೂ ಡ್ಯಾಮೇಜ್ ಆಗಿದೆ ಎಂದು ತಿಳಿಸಿದ ಅವರು, ಡಿಕೆಶಿ ಅವರನ್ನು ಭೇಟಿ ಮಾಡೋಕೆ ನನಗೆ ಮುಖವಿಲ್ಲ, ಅಷ್ಟರ ಮಟ್ಟಿಗೆ ಮುಖ ಕೆಡಿಸಿಕೊಂಡಿದ್ದೇನೆ ಎಂದರು.
ಪಕ್ಷ ನನ್ನನ್ನು ಉಚ್ಛಾಟಿಸಿದ್ರು, ನನ್ನ ಸಮಾಜ ಸೇವೆ ಮುಂದುವರಿಯಲಿದೆ, ಯಡವಟ್ಟಿನಿಂದ ಪಾಠ ಕಲಿತಿದ್ದೇನೆ, ಕಾಂಗ್ರೆಸ್ ಪಕ್ಷಕ್ಕೆ ನನ್ನ ಬೆಂಬಲ ಇದ್ದೇ ಇರುತ್ತದೆ ಎಂದು ತಿಳಿಸಿದರಲ್ಲದೆ, ಡಿ ಕೆ ಶಿವಕುಮಾರ್ ಅವರು ಯಾವ ಶಿಕ್ಷೆ ಕೊಟ್ಟರೂ ಪರವಾಗಿಲ್ಲ ಅದನ್ನು ಅನುಭವಿಸುತ್ತೇನೆ ಎಂದು ಸಲೀಂ ತಿಳಿಸಿದರು. ನಾನು ಡಿಕೆಶಿಯವರ ಬಳಿ ಬಹಿರಂಗ ಕ್ಷಮೆಯಾಚಿಸ್ತೇನೆ ಎಂದು ಸಲೀಂ ಇದೇ ಸಂದರ್ಭದಲ್ಲಿ ತಿಳಿಸಿದರು.

ಯಾರನ್ನೂ ದೂಷಿಸುವುದಿಲ್ಲ: ಡಿಕೆ ಶಿವಕುಮಾರ್
ಸಲೀಂ ಹಾಗೂ ವಿ.ಎಸ್ ಉಗ್ರಪ್ಪ ಅವರ ಸಂಭಾಷಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್ , ನನ್ನ ಬಗ್ಗೆ ಯಾರು, ಯಾವ ರೀತಿ ಮಾತಾಡಬೇಕೋ ಮಾತನಾಡಿದ್ದಾರೆ. ಅದನ್ನು ಯಾರು ಯಾವ ರೀತಿ ಬಳಸಿಕೊಳ್ಳಬೇಕೋ, ಬಳಸಿಕೊಂಡಿದ್ದಾರೆ. ನಾನು ಬಿಜೆಪಿ ಅವರನ್ನಾಗಲಿ, ಮಾಧ್ಯಮಗಳನ್ನಾಗಲಿ ದೂಷಿಸುವುದಿಲ್ಲ. ನಾವು ಅವಕಾಶ ಕೊಟ್ಟಿದ್ದರಿಂದ ಬೇರೆಯವರು ಬಳಸಿಕೊಂಡಿದ್ದಾರೆ. ನಾನು ಯಾರನ್ನೂ ದೂಷಣೆ ಮಾಡುವುದಿಲ್ಲ. ಇದು ನನ್ನ ವೈಯಕ್ತಿಕವಾದುದಲ್ಲ, ಪಕ್ಷದ ವಿಚಾರ. ಈ ಪಕ್ಷವನ್ನು ನಾನು ಮಾತ್ರ ಕಟ್ಟಿಲ್ಲ. ಹಳ್ಳಿಯ ಲಕ್ಷಾಂತರ ಜನ, ಕಾರ್ಯಕರ್ತರು ಈ ಪಕ್ಷ ಕಟ್ಟಿದ್ದಾರೆ ಎಂದು ತಿಳಿಸಿದರು.
ಈ ಹಿಂದೆ ಬಿಜೆಪಿ ನಾಯಕರ ಧ್ವನಿ ಬಿದ್ದು ಹೋಗಿತ್ತಾ
ಕಾಂಗ್ರೆಸ್ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಯಾರು ಏನು ಮಾತನಾಡುತ್ತಾರೋ ಮಾತಾಡಲಿ. ಕಳೆದ ಎರಡು ವರ್ಷಗಳಿಂದ ಯಾರು ಏನೆಲ್ಲಾ ಮಾತನಾಡಿದ್ದಾರೆ ಅದನ್ನೂ ನೋಡಲಿ. ಎಚ್. ವಿಶ್ವನಾಥ್, ಯೋಗೀಶ್ವರ್, ಮಂಚದ ಮೇಲೆ ರಮೇಶ್ ಜಾರಕಿಹೊಳಿ ಅವರು ಮಾತನಾಡಿದರಲ್ಲಾ, ಅದಕ್ಕೆ ಉತ್ತರ ಯಾಕಿಲ್ಲ? ಯತ್ನಾಳ್ ಅವರ ಹೇಳಿಕೆಗೆ ಸಿ.ಟಿ ರವಿ ಅವರಾಗಲಿ, ಈಗ ಮಾತನಾಡುತ್ತಿರುವವರಾಗಲಿ ಯಾಕೆ ಉತ್ತರ ನೀಡಲಿಲ್ಲ. ಯಡಿಯೂರಪ್ಪ, ವಿಜಯೇಂದ್ರ ಕಲೆಕ್ಷನ್, ಅವರ ಮೊಮ್ಮಗನ ಬಗ್ಗೆ ಮಾತನಾಡಿದಾಗ ಇವರ ಧ್ವನಿ ಏನು ಬಿದ್ದು ಹೋಗಿತ್ತಾ? ಆಗ್ಯಾಕೆ ಮಾತನಾಡಲಿಲ್ಲ? ಎಂದು ತಿರುಗೇಟು ನೀಡಿದರು.
ಪಕ್ಷ ಅಧಿಕಾರಕ್ಕೆ ತರುವುದಷ್ಟೇ ನನ್ನ ಕರ್ತವ್ಯ
ಡಿ.ಕೆ ಶಿವಕುಮಾರ್, ಯಡಿಯೂರಪ್ಪ, ದೇವೇಗೌಡರನ್ನು ಒಂದೇ ವೇದಿಕೆ ಮೇಲೆ ಕರೆತರುವ ಪ್ರಯತ್ನ ಮಾಡುತ್ತೇವೆ ಎಂಬ ಸಿ.ಎಂ. ಇಬ್ರಾಹಿಂ ಅವರ ಹೇಳಿಕೆಗೆ ಪ್ರತಿಕ್ರಯಿಸಿದ ಅವರು, ‘ನಾನು ಪಕ್ಷದ ಅಧ್ಯಕ್ಷ, ಅವರು ದೊಡ್ಡ ನಾಯಕರು. ಎಲ್ಲರ ಸಂಪರ್ಕ ಇಟ್ಟುಕೊಂಡಿರುವವರು. ಕಾರ್ಯಕರ್ತರ ಜತೆ ನಿಂತು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನನ್ನ ಕರ್ತವ್ಯ. ನಾನು ಆ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದರು.