ನಮ್ಮದು ನೀತಿ ರಾಜಕಾರಣ : ಜಾತಿ ರಾಜಕಾರಣ ನಮ್ಮ ಪಕ್ಷ ಮಾಡಲ್ಲ: ಡಿ ಕೆ ಶಿವಕುಮಾರ್ ಸ್ಪಷ್ಟನೆ

ಕಲಬುರಗಿ : ನಾವು ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತೇವೆ. ಅಲ್ಪಸಂಖ್ಯಾತರು ಪ್ರಜ್ಞಾವಂತ ಮತದಾರರು. ಯಾರಿಗೆ ಮತ ಹಾಕಿದರೆ ಅನುಕೂಲ ಎಂಬುದು ಅವರಿಗೆ ಗೊತ್ತಿದೆ. ಕೇವಲ ಒಂದು ವರ್ಗ ಎಂಬುದಿಲ್ಲ. ಎದುರಾಳಿ ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆ ಮಾಡುತ್ತವೆ. ಅದಕ್ಕೆ ಮತದಾರ ತಕ್ಕ ಹಾಗೂ ಸೂಕ್ಷ್ಮ ಉತ್ತರ ನೀಡುತ್ತಾನೆ ಎಂದು ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಡಿ.ಕೆ. ಶಿವಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಂದಗಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರಿಗೆ ಮನ್ನಣೆ ಇಲ್ಲ ಎಂಬ ಸಿಎಂ ಇಬ್ರಾಹಿಂ ಅವರ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದಾಗ, ಅವರ ಮಾತುಗಳನ್ನು ನಾನು ನೋಡಿಲ್ಲ, ಕೇಳಿಲ್ಲ. ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದರು.


ಮನಗೂಳಿ ಅವರು ಭೇಟಿಯಾಗಿದ್ದಕ್ಕೆ ಅವರ ಪುತ್ರನೇ ಸಾಕ್ಷಿ
ಮನಗೂಳಿ ಅವರು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದು ಸುಳ್ಳು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮನಗೂಳಿ ಅವರು ಇಂದು ನಮ್ಮ ಜತೆ ಇಲ್ಲ. ಅವರು ಬಂದು ನಮ್ಮ ಮಗನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಎಂದು ಹೇಳಿದ್ದು ನಿಜ ಎಂದರು.
ಇದಕ್ಕೆ ಅವರ ಪುತ್ರ ಅಶೋಕ್ ಮನಗುಳಿ ಅವರೇ ಸಾಕ್ಷಿ. 15 ದಿನ ಮೊದಲು ಭೇಟಿ ಮಾಡಿದ್ದರು ಎಂದರೆ ಮೀಟರ್ ಹಾಕಿ, ಲೆಕ್ಕ ಮಾಡಿ ಹೇಳಲು ಆಗುತ್ತಾ? ಅವರು ಬಂದಿದ್ದು ನಿಜ. ಮಗನ ಬಗ್ಗೆ ಹೇಳಿದ್ದೂ ನಿಜ. ಬೇಕಿದ್ದರೆ ಅಶೋಕ್ ಮನಗೂಳಿ ಅವರನ್ನೇ ಕೇಳಿ’ ಎಂದು ಸ್ಪಷ್ಟಪಡಿಸಿದರು.
ಜನರ ಅಭೂತಪೂರ್ವ ಬೆಂಬಲ
ಸಿಂದಗಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನನ್ನ ಕಣ್ಣಾರೆ ಜನರ ಅಭೂತಪೂರ್ವ ಬೆಂಬಲ ನೋಡಿದ್ದೇನೆ. ನಾನು ನನ್ನ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವಾಗ ಇದ್ದುದ್ದಕ್ಕಿಂತ ಹೆಚ್ಚಿನ ಪ್ರೋತ್ಸಾಹವನ್ನು ಇಲ್ಲಿನ ಜನ ಸಿಂದಗಿಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ನೀಡಿದ್ದಾರೆ ಎಂದು ತಿಳಿಸಿದರು.
ನಮ್ಮ ಪಕ್ಷ ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಕಣದಲ್ಲಿದ್ದ ಅನೇಕ ಅಭ್ಯರ್ಥಿಗಳು ಅಶೋಕ್ ಮನಗೂಳಿ ಅವರೇ ತಮ್ಮ ತಂದೆ ಸ್ಥಾನವನ್ನು ತುಂಬಬೇಕು ಎಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿರುವ ಕಾಂಗ್ರೆಸ್ ಪಕ್ಷದ ಸಮೂಹ ಅಶೋಕ್ ಮನಗೂಳಿ ಅವರ ಹಿಂದೆ ನಿಂತಿದೆ. ಮನಗೂಳಿ ಅವರಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದರು.
ಸಿಂದಗಿ ಕ್ಷೇತ್ರದ ಜನರ ಮೇಲೆ ನನಗೆ ಅಪಾರವಾದ ನಂಬಿಕೆ ಇದೆ. ಜನ ಬಿಜೆಪಿ ಆಡಳಿತ ನೋಡಿ, ಬೇಸತ್ತಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ಶಾಸಕರ ಆಡಳಿತದ ಅವಶ್ಯಕತೆ ಇದೆ ಎಂದು ಜನ ಭಾವಿಸಿದ್ದಾರೆ ಎಂದು ತಿಳಿಸಿದರು.
ಸಿಂದಗಿ ರೀತಿಯಲ್ಲೇ ಹಾನಗಲ್ ನಲ್ಲೂ ಜನ ಕಾಂಗ್ರೆಸ್ ಅಭ್ಯರ್ಥಿಗೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಅಲ್ಲಿ ಬಿಜೆಪಿಯಲ್ಲಿನ ಗೊಂದಲವನ್ನು ಎಲ್ಲರೂ ನೋಡಿದ್ದಾರೆ. ಎರಡೂ ಕ್ಷೇತ್ರದಲ್ಲೂ ನಾವು ಶುಭ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದು, ಶುಭವಾರ್ತೆ ತೆಗೆದುಕೊಂಡು ಹೋಗುತ್ತೇವೆ ಎಂದು ಅಭಿಪ್ರಾಯಪಟ್ಟರು.
ಡಿಕೆ ಶಿವಕುಮಾರ್ ವಾಹನ ತಪಾಸಣೆ
ಸಿಂದಗಿ ತಾಲೂಕಿನ ಮೊರಟಗಿ ಚೆಕ್ ಪೋಸ್ಟ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಾರನ್ನು ಚುನಾವಣೆ ಅಧಿಕಾರಿಗಳು ಹಾಗೂ ಪೊಲೀಸರು ತಪಾಸಣೆ ನಡೆಸಿದರು.

ತಪಾಸಣೆ ನಡೆಸಿದ ಬಳಿಕ ಡಿಕೆ ಶಿವಕುಮಾರ್ ಅವರು ಸಿಂಧಗಿ ಕಡೆ ಪ್ರಯಾಣ ಬೆಳೆಸಿದರು.

More News

You cannot copy content of this page